ಮೈಸೂರು ವೈದ್ಯೆ ಹತ್ಯೆ: ಈ ಕೊಲೆ ಆರೋಪಿ ಒಂದು ಕಾಲದ ಲಾರಿ ಕ್ಲೀನರ್, ಈಗ 350 ಕೋಟಿ ರೂ ಆಸ್ತಿ ಒಡೆಯ!!
ಮೈಸೂರು ಮೂಲದ ಪಾರಂಪರಿಕ ವೈದ್ಯೆ ಶಾಬಾ ಷರೀಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೈಬಿನ್ ಅಶ್ರಫ್ 350 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
Published: 14th May 2022 11:31 PM | Last Updated: 14th May 2022 11:31 PM | A+A A-

ವೈದ್ಯೆಯ ಕೊಲೆ ಆರೋಪಿ
ಕೊಚ್ಚಿ: ಮೈಸೂರು ಮೂಲದ ಪಾರಂಪರಿಕ ವೈದ್ಯೆ ಶಾಬಾ ಷರೀಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೈಬಿನ್ ಅಶ್ರಫ್ 350 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಈ ಕುರಿತು ಕೇರಳ ಪೊಲೀಸರು ನೀಡಿರುವ ಮಾಹಿತಿ ಅನ್ವಯ, ವಯನಾಡ್ ಮೂಲದ ಆರೋಪಿ ಶೈಬಿನ್ ಅಶ್ರಫ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದು, ವಿಚಾರಣೆಯ ಸಮಯದಲ್ಲಿ ತನ್ನ ನಾಟಕೀಯ ಜೀವನದ ಚಿತ್ರಣವನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಆತನ ಹೇಳಿಕೆ ಪ್ರಕಾರ, 'ಆರೋಪಿ ಶೈಬಿನ್ ಕೆಲವೇ ತಿಂಗಳುಗಳ ಅವಧಿಯಲ್ಲಿ ಈ ಕೋಟ್ಯಂತರ ಆಸ್ತಿ ಸಂಪಾದನೆ ಮಾಡಿದ್ದು, ಇವೆಲ್ಲವನ್ನೂ ನಾವು ಇನ್ನೂ ಪರಿಶೀಲಿಸಬೇಕಾಗಿದೆ. ಶೈಬಿನ್ನ ಆರ್ಥಿಕ ಮೂಲಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಜಿತ್ ದಾಸ್ ಹೇಳಿದ್ದಾರೆ.
ಸುಲ್ತಾನ್ ಬತ್ತೇರಿ ಸಮೀಪದ ಮೈತಾನಿಕುನ್ನು ಎಂಬಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಶೈಬಿನ್, ಈ ಹಿಂದೆ ಲಾರಿ ಕ್ಲೀನರ್ ಮತ್ತು ಆಟೋರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಉದ್ಯೋಗದ ಹುಡುಕಾಟದಲ್ಲಿ ತಾಯಿ ಗಲ್ಫ್ಗೆ ತೆರಳಿದ ನಂತರ ಅವರ ಅದೃಷ್ಟ ಬದಲಾಯಿತು ಎನ್ನಲಾಗಿದೆ. ಶೀಘ್ರದಲ್ಲೇ, ಶೈಬಿನ್ ಕೂಡ ಗಲ್ಫ್ ಗೆ ಹೋಗಿ ಬಂದಿದ್ದ. ಬಳಿಕ ಆ ಕುಟುಂಬ ಆರ್ಥಿಕವಾಗಿ ಸಮೃದ್ಧವಾಯಿತು.
ಈ ಕುರಿತು ಮೈತಾನಿಕುನ್ನು ನಿವಾಸಿ ಹೇಳಿಕೆ ನೀಡಿದ್ದು, 'ಅವರು ಗಲ್ಫ್ ನಲ್ಲಿ ಕೆಲವು ಅರಬ್ಬರೊಂದಿಗೆ ಡೀಸೆಲ್ ವ್ಯಾಪಾರದಲ್ಲಿದ್ದರು ಎಂದು ಅವರು ನಮಗೆ ತಿಳಿಸಿದರು. ನಮಗೆ ಸತ್ಯ ಗೊತ್ತಿಲ್ಲ. 2015 ರಲ್ಲಿ, ಸುಲ್ತಾನ್ ಬತ್ತೇರಿಯ ಪುತನಕುನ್ನು ಎಂಬಲ್ಲಿ ಅವರ ಐಶಾರಾಮಿ ಮನೆಯ ನಿರ್ಮಾಣವು ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಪ್ರಾರಂಭವಾಯಿತು ಎಂದರು.
ಶೈಬಿನ್ ಅನೇಕ ಯುವಕರಿಗೆ ಗಲ್ಫ್ಗೆ ಹೋಗಲು ಸಹಾಯ ಮಾಡಿದ್ದಲ್ಲದೆ, ನಿಲಂಬೂರ್ಗೆ ಸ್ಥಳಾಂತರಗೊಳ್ಳುವ ಮೊದಲು ವಯನಾಡಿನಲ್ಲಿ ವಿವಿಧ ವ್ಯವಹಾರಗಳನ್ನು ಪ್ರಾರಂಭಿಸಿದ್ದ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಅವರು ವಯನಾಡ್ನಲ್ಲಿ ಶುಂಠಿ ಕೃಷಿ, ಜವಳಿ ಮತ್ತು ಮೀನು ಮಾರಾಟದಂತಹ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದ ಮತ್ತು ವಿಶ್ವಾಸಾರ್ಹ ಗ್ಯಾಂಗ್ ಸದಸ್ಯರನ್ನು ಹೊಂದಿದ್ದ ಎನ್ನಲಾಗಿದೆ.
ಈ ಮಧ್ಯೆ, ಶಾಬಾ ಹತ್ಯೆಯ ತನಿಖೆ ನಡೆಸುತ್ತಿರುವ ತನಿಖಾ ತಂಡವು ಪೊಲೀಸರಿಗೆ ಅಪರಾಧವನ್ನು ಬಹಿರಂಗಪಡಿಸಿದ ಸುಲ್ತಾನ್ ಬತ್ತೇರಿ ಮೂಲದ ಎರಡನೇ ಶಂಕಿತ ನೌಶಾದ್ ತಂಗಳತ್ ನನ್ನು ನಿಲಂಬೂರಿನ ಶೈಬಿನ್ ಮನೆಗೆ ಕರೆದೊಯ್ದಿದ್ದು, ಶಾಬಾನನ್ನು ಒಂದು ವರ್ಷದಿಂದ ಒತ್ತೆಯಾಳಾಗಿ ಇಟ್ಟುಕೊಂಡು ಹತ್ಯೆ ಮಾಡಲಾಗಿತ್ತು ಎಂದು ಆತ ಬಾಯಿ ಬಿಟ್ಟಿದ್ದ ಎನ್ನಲಾಗಿದೆ. ಆದರೆ ಬೆಳಗ್ಗೆಯಿಂದ ಸಾಕ್ಷ್ಯ ಸಂಗ್ರಹ ಕಾರ್ಯ ನಡೆದಿದ್ದರೂ ತನಿಖಾ ತಂಡಕ್ಕೆ ಯಾವುದೇ ಮಹತ್ವದ ಪುರಾವೆ ಸಿಕ್ಕಿರಲಿಲ್ಲ. ಸಾಕ್ಷ್ಯಾಧಾರಗಳ ಸಂಗ್ರಹವು ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ನಿಲಂಬೂರು ಪೊಲೀಸ್ ನಿರೀಕ್ಷಕ ಸುನೀಲ್ ಪಿ. ಹೇಳಿದ್ದಾರೆ.
ಅಂತೆಯೇ ನೌಶಾದ್ನನ್ನು ಎಡವಣ್ಣಾದಲ್ಲಿನ ಸೀತಿ ಹಾಜಿ ಸೇತುವೆ ಸೇರಿದಂತೆ ಇತರ ಅಪರಾಧ ಸ್ಥಳಗಳಿಗೆ ಕರೆದೊಯ್ಯಲಾಗುವುದು, ಅಲ್ಲಿಂದ ಶಾಬಾ ಅವರ ದೇಹದ ತುಂಡುಗಳನ್ನು ಚಾಲಿಯಾರ್ಗೆ ಎಸೆದ ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ನೌಶಾದ್ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು, ಪ್ರಮುಖ ಆರೋಪಿ ಶೈಬಿನ್ ಮತ್ತು ಆತನ ಸಹ ಆರೋಪಿಗಳಾದ ಸುಲ್ತಾನ್ ಬತ್ತೇರಿ ಮೂಲದ ನಿಶಾದ್ ಮತ್ತು ಶಿಹಾಬುದ್ದೀನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಕಸ್ಟಡಿಗೆ ಕೋರಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ.
ಏತನ್ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಹಿಡಿಯಲು ಪೊಲೀಸ್ ತಂಡವು ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಆರೋಪಿಗಳು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನು ಸಹ ಪೊಲೀಸ್ ತಂಡ ಪರಿಶೀಲಿಸುತ್ತಿದೆ. ನೌಶಾದ್ ಪೊಲೀಸರಿಗೆ ಹಸ್ತಾಂತರಿಸಿದ ಪೆನ್ ಡ್ರೈವ್ನಲ್ಲಿ ಈ ಬಗ್ಗೆ ಸುಳಿವು ನೀಡುವ ದೃಶ್ಯಗಳಿವೆ. ಶಾಬಾ ಷರೀಫ್ ಅವರನ್ನು 2020 ರ ಅಕ್ಟೋಬರ್ನಲ್ಲಿ ಈ ಗ್ಯಾಂಗ್ ಕೊಂದಿತ್ತು. ದುಷ್ಕರ್ಮಿಗಳು ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಎಡವಣ್ಣ ಬಳಿಯ ಚಾಲಿಯಾರ್ನಲ್ಲಿ ಎಸೆದಿದ್ದರು. ಒಂದೂವರೆ ವರ್ಷಗಳ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.