ಶೀಘ್ರದಲ್ಲೇ ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನಿಯಮ ಜಾರಿ: ಸಿಇಸಿ ಸುಶೀಲ್ ಚಂದ್ರ
ಕೇಂದ್ರ ಸರ್ಕಾರ ಶೀಘ್ರದಲ್ಲೇ ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಶನಿವಾರ ಹೇಳಿದ್ದಾರೆ.
Published: 14th May 2022 03:13 PM | Last Updated: 14th May 2022 03:13 PM | A+A A-

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ
ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಶನಿವಾರ ಹೇಳಿದ್ದಾರೆ.
ಮತದಾರರು ತಮ್ಮ ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ. ಸ್ವಯಂಪ್ರೇರಿತವಾಗಿರುತ್ತದೆ. ಆದರೆ ಆಧಾರ್ ಲಿಂಕ್ ಮಾಡದವರು "ಸಾಕಷ್ಟು ಕಾರಣಗಳನ್ನು ನೀಡಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಸನ್ನದ್ಧ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ
ಸುಶೀಲ್ ಚಂದ್ರ ಅವರು ಇಂದು ನಿವೃತ್ತಿಯಾಗುತ್ತಿದ್ದು, ತಮ್ಮ ಕಚೇರಿಯಿಂದ ನಿರ್ಗಮಿಸುವ ಮುನ್ನ, ಮತದಾರರು ಮತ್ತು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವವರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವರ್ಷದ ಮಾರ್ಚ್ನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಲಸಿಕೆ ಅಭಿಯಾನ ತೀವ್ರಗೊಳಿಸುವಲ್ಲಿ ಚುನಾವಣಾ ಸಮಿತಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ನಡೆದ ಎರಡು ಪ್ರಮುಖ ಚುನಾವಣಾ ಸುಧಾರಣೆಗಳೆಂದರೆ 18 ವರ್ಷ ತುಂಬಿದವರನ್ನು ಮತದಾರರಾಗಿ ನೋಂದಾಯಿಸಲು ಒಂದು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ನೀಡುವುದು ಮತ್ತು ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸುಶೀಲ್ ಚಂದ್ರ ಅವರು ತಿಳಿಸಿದ್ದಾರೆ.
"ಮೊದಲು, ಪ್ರತಿ ವರ್ಷ ಜನವರಿ 1 ರಂದು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಇತ್ತು. ಇದನ್ನು ಬದಲಾಯಿಸುವ ಅಗತ್ಯ ಇತ್ತು ಮತ್ತು ಜನ 18 ವರ್ಷ ತುಂಬಿದ ಕೂಡಲೇ ನೋಂದಾಯಿಸಿಕೊಳ್ಳಬೇಕು ಎಂದು ನಾವು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಈಗ ಈ ಸುಧಾರಣೆಯೊಂದಿಗೆ, ನಾಲ್ಕು ದಿನಾಂಕಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಸುಧಾರಣೆಯು ಕಳೆದ 20 ವರ್ಷಗಳಿಂದ ಬಾಕಿ ಉಳಿದಿತ್ತು" ಸುಶೀಲ್ ಚಂದ್ರ ಅವರು ಹೇಳಿದ್ದಾರೆ.