ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹೇಳಿಕೆ ನ್ಯಾಯಯುತವಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಹೇಳಿಕೆಯ ನಂತರ ನ್ಯಾಯಾಲಯವು ಆ ಸ್ಥಳವನ್ನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ ಆದೇಶಿಸಿರುವುದು ನ್ಯಾಯಯುತವಾಗಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
Published: 17th May 2022 09:30 AM | Last Updated: 17th May 2022 01:43 PM | A+A A-

ಜ್ಞಾನವಾಪಿ ಮಸೀದಿ
ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಹೇಳಿಕೆಯ ನಂತರ ನ್ಯಾಯಾಲಯವು ಆ ಸ್ಥಳವನ್ನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ ಆದೇಶಿಸಿರುವುದು ನ್ಯಾಯಯುತವಾಗಿಲ್ಲ ಮತ್ತು ಕೋಮು ಸೌಹಾರ್ದತೆಯನ್ನು ಹದಗೆಡಿಸುವ ಯತ್ನ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ನ್ಯಾಯಾಲಯದ ಕಡ್ಡಾಯ ವೀಡಿಯೋಗ್ರಫಿ ಸಮೀಕ್ಷೆಯ ಸಂದರ್ಭದಲ್ಲಿ, ಮುಸ್ಲಿಂರು ನಮಾಜ್ ಗೂ ಮುನ್ನ ಕೈ ತೊಳೆದುಕೊಳ್ಳುವ ವಜೂಖಾನಾ ಸಮೀಪದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದರು. ಆದರೆ, ಈ ಹೇಳಿಕೆಯನ್ನು ಅಲ್ಲಗಳೆದಿರುವ ಮಸೀದಿ ನಿರ್ವಹಣಾ ಸಮಿತಿ ವಕ್ತಾರರೊಬ್ಬರು, ಇದು ಕಾರಂಜಿಯ ಭಾಗವಾಗಿದೆ ಎಂದಿದ್ದಾರೆ. ನ್ಯಾಯಾಲಯ ಸೀಲಿಂಗ್ ಆದೇಶ ಪ್ರಕಟಿಸುವ ಮುನ್ನ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ಹೇಳುವುದನ್ನು ಸಂಪೂರ್ಣವಾಗಿ ಆಲಿಸಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲ್ ಮಾಡಿ: ಕೋರ್ಟ್ ಆದೇಶ
ಜ್ಞಾನವಾಪಿ ಮಸೀದಿ ಮಸೀದಿಯಾಗಿದೆ ಮತ್ತು ಮಸೀದಿಯಾಗಿಯೇ ಉಳಿಯುತ್ತದೆ, ಇದನ್ನು ದೇವಾಲಯ ಎಂದು ಕರೆಯುವ ಪ್ರಯತ್ನವು ಕೋಮು ಸೌಹಾರ್ದತೆಯನ್ನು ಸೃಷ್ಟಿಸುವ ಪಿತೂರಿಗಿಂತ ಹೆಚ್ಚೇನೂ ಅಲ್ಲ. ಇದು ಸಾಂವಿಧಾನಿಕ ಹಕ್ಕುಗಳು ಮತ್ತು ಕಾನೂನಿಗೆ ವಿರುದ್ಧವಾದ ವಿಷಯವಾಗಿದೆ ಎಂದು ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಐಎಂಪಿಎಲ್ಬಿ ಪ್ರಧಾನ ಕಾರ್ಯದರ್ಶಿ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿದ್ದಾರೆ.
"1937 ರಲ್ಲಿ, ದೀನ್ ಮೊಹಮ್ಮದ್ Vs ರಾಜ್ಯ ಕಾರ್ಯದರ್ಶಿ ಪ್ರಕರಣದಲ್ಲಿ, ನ್ಯಾಯಾಲಯವು ಮೌಖಿಕ ಸಾಕ್ಷ್ಯ ಮತ್ತು ದಾಖಲೆಗಳ ಆಧಾರದ ಮೇಲೆ ಜ್ಞಾನವಾಪಿ ಮಸೀದಿ ಸಂಕೀರ್ಣ ಮುಸ್ಲಿಂ ವಕ್ಫ್ಗೆ ಸೇರಿದ್ದು ಮತ್ತು ಅದರಲ್ಲಿ ನಮಾಜ್ ಮಾಡುವ ಹಕ್ಕು ಮುಸ್ಲಿಮರಿಗೆ ಇದೆ ಎಂದು ನಿರ್ಧರಿಸಿತ್ತು. ಮಸೀದಿಯ ವಿಸ್ತೀರ್ಣ ಎಷ್ಟು ಮತ್ತು ದೇವಸ್ಥಾನದ ವಿಸ್ತೀರ್ಣ ಎಷ್ಟು ಎಂಬುದನ್ನೂ ನ್ಯಾಯಾಲಯ ನಿರ್ಧರಿಸಿತ್ತು. ಅದೇ ಸಮಯದಲ್ಲಿ, ವಝೂಖಾನಾವನ್ನು ಮಸೀದಿಯ ಆಸ್ತಿಯಾಗಿ ಸ್ವೀಕರಿಸಲಾಯಿತು ಎಂದು ರಹಮಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ಪೂರ್ಣ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ತದನಂತರ 1991 ರಲ್ಲಿ, ಪೂಜಾ ಸ್ಥಳಗಳ ಕಾಯ್ದೆಯನ್ನು ಅಂಗೀಕರಿಸಿದ ಸಂಸತ್ತು 1947 ರಲ್ಲಿದ್ದ ಪೂಜಾ ಸ್ಥಳಗಳನ್ನು ಅದೇ ಸ್ಥಿತಿಯಲ್ಲಿ ನಿರ್ವಹಿಸಲಾಗುವುದು ಎಂದು ಹೇಳುತ್ತದೆ. ಬಾಬರಿ ಮಸೀದಿ ತೀರ್ಪಿನಲ್ಲೂ, ಎಲ್ಲಾ ಸ್ಥಳಗಳು ಪೂಜಾ ಸ್ಥಳಗಳು ಈ ಕಾನೂನಿನ ಅಡಿಯಲ್ಲಿರುತ್ತವೆ ಎಂದು ಹೇಳಿರುವುದಾಗಿ ಅವರು ಹೇಳಿದ್ದಾರೆ. ಈ ಸಂಬಂಧ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.