ಭಯೋತ್ಪಾದನೆಗೆ ಆರ್ಥಿಕ ನೆರವು: ಯಾಸಿನ್ ಮಲಿಕ್ ಅಪರಾಧ ಸಾಬೀತು, ಮೇ 25ರಂದು ಶಿಕ್ಷೆ ಪ್ರಕಟ
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅಪರಾಧಿ ಎಂದು ದೆಹಲಿ ಕೋರ್ಟ್ ಗುರುವಾರ ತೀರ್ಪು ನೀಡಿದೆ.
Published: 19th May 2022 02:11 PM | Last Updated: 19th May 2022 04:36 PM | A+A A-

ಯಾಸಿನ್ ಮಲಿಕ್
ನವದೆಹಲಿ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅಪರಾಧಿ ಎಂದು ದೆಹಲಿ ಕೋರ್ಟ್ ಗುರುವಾರ ತೀರ್ಪು ನೀಡಿದೆ.
2017ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಆರೋಪಗಳ ಸಂಬಂಧ ಯಾಸಿನ್ ಮಲಿಕ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದರು. ಇಂದು ನ್ಯಾಯಾಲಯದ ವಿಚಾರಣೆ ವೇಳೆ ಯಾಸಿನ್ ಮಲಿಕ್ ದೋಷಿ ಎಂದು ಸಾಬೀತಾದ ನಂತರ ಪೊಲೀಸರು ಆತನನ್ನು ನ್ಯಾಯಾಲಯದಿಂದ ಕರೆತಂದರು.
ವಿಚಾರಣೆ ವೇಳೆ ಯಾಸಿನ್ ಆರ್ಥಿಕ ಸ್ಥಿತಿಗತಿ ಪರಿಶೀಲನೆ ನಡೆಸುವಂತೆ ಹಾಗೂ ಈ ಕುರಿತು ವರದಿ ನೀಡುವಂತೆ ಎನ್ಐಎ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅಲ್ಲದೆ, ಶಿಕ್ಷೆಯನ್ನು ಮೇ.25ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಎಲ್ಲ ಆರೋಪಗಳಲ್ಲಿಯೂ ತಾನು ತಪ್ಪಿತಸ್ಥ ಎಂದು ಮೇ 10ರಂದು ಮಲಿಕ್ ತಪ್ಪೊಪ್ಪಿಗೆ ನೀಡಿದ್ದ. 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಉಗ್ರರಿಗೆ ಆರ್ಥಿಕ ಸಹಾಯ: ಕೊನೆಗೂ ತಪ್ಪೊಪ್ಪಿಕೊಂಡ ಯಾಸಿನ್ ಮಲಿಕ್
ಯಾಸಿನ್ ಮಲಿಕ್ 2019ರಿಂದಲೂ ದೆಹಲಿಯ ಭಾರಿ ಭದ್ರತೆಯ ತಿಹಾರ್ ಜೈಲಿನಲ್ಲಿದ್ದಾನೆ. ಆತನ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿದೆ. ತನ್ನ ವಿರುದ್ಧ ದಾಖಲಾದ ಆರೋಪಗಳ ವಿರುದ್ಧ ಆತ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ.