
ಕೇದಾರನಾಥ ದೇಗುಲ
ಲಖನೌ: ಕೇದಾರನಾಥ ಯಾತ್ರಾತಾಣಕ್ಕೆ ಸಾಕು ನಾಯಿ ಕರೆದೊಯ್ದಿದ್ದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪವಿತ್ರ ಕೇದಾರನಾಥ ದೇಗುಲಕ್ಕೆ ತನ್ನ ಸಾಕುನಾಯಿಯನ್ನು ಕರೆದುಕೊಂಡು ಹೋದ ನೋಯ್ಡಾ ನಿವಾಸಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ. ಯೂಟ್ಯೂಬ್ ವ್ಲಾಗರ್ ಆಗಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಮೂಲಗಳ ಪ್ರಕಾರ, 33 ವರ್ಷದ ವಿಕಾಸ್ ತ್ಯಾಗಿ ಎಂದು ಗುರುತಿಸಲಾದ ವ್ಯಕ್ತಿ, ಹಾಲಿ ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ನವಾಬ್ ಎಂಬ ತನ್ನ ಸೈಬೀರಿಯನ್ ಹಸ್ಕಿಯನ್ನು ಪವಿತ್ರ ದೇಗುಲಕ್ಕೆ ಕರೆದೊಯ್ದಿದ್ದಾನೆ. ಅಲ್ಲದೆ ವಿಡಿಯೋ ಕೂಡ ಮಾಡಿದ್ದಾನೆ. ವೀಡಿಯೊದಲ್ಲಿ, ತ್ಯಾಗಿ ನಾಯಿಯ ಮುಂಭಾಗದ ಪಂಜಗಳನ್ನು ಹಿಡಿದು ಕೇದಾರನಾಥ ದೇವಾಲಯದ ಹೊರ ಆವರಣದಲ್ಲಿರುವ 'ನಂದಿ'ಯ ಪ್ರತಿಮೆಯನ್ನು ಸ್ಪರ್ಶಿಸುವಂತೆ ಕಾಣಿಸುತ್ತದೆ. ವಿಡಿಯೋದಲ್ಲಿ ಒಬ್ಬ ಪುರೋಹಿತನು ನವಾಬನ ತಲೆಯ ಮೇಲೆ ತಿಲಕವನ್ನು (ಹಣೆಯ ಮೇಲೆ ಹಾಕುವ ಸಿಂಧೂರ) ಇಡುವುದನ್ನು ಸಹ ಕಾಣಬಹುದು.
ತ್ಯಾಗಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ ಎಂದು ಮೂಲಗಳು ಹೇಳಿವೆ, ಈ ದೃಶ್ಯಗಳು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಅವರ ಆದೇಶದ ಮೇರೆಗೆ ಸಿಇಒ ಸಲ್ಲಿಸಿದ ದೂರಿನ ಆಧಾರದ ಮೇಲೆ ತ್ಯಾಗಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೂಡಲೇ ವ್ಲಾಗರ್ ಅನ್ನು ಗುರುತಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಆದರೆ ವ್ಯಕ್ತಿ ತನ್ನ Instagram ಹ್ಯಾಂಡಲ್ huskyindia0 ನಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ತನ್ನ ಸಾಕುಪ್ರಾಣಿ ಕಳೆದ ನಾಲ್ಕು ವರ್ಷಗಳಿಂದ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದೆ. ಹಾಗಾದರೆ ಈಗ ಈ ನಾಟಕ ಏಕೆ? ನಾಯಿಗಳು ಕೂಡ ದೇವರ ಸೃಷ್ಟಿ ಎಂದು ತ್ಯಾಗಿ ಸಮರ್ಥಿಸಿಕೊಂಡಿದ್ದಾರೆ. ಜನರು ಈಜುಕೊಳಕ್ಕೆ ಭೇಟಿ ನೀಡಿದರೂ ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ. ನಾವು 20 ಕಿಲೋಮೀಟರ್ ಟ್ರೆಕ್ಕಿಂಗ್ ಮಾಡಿದ ನಂತರ ದೇವಸ್ಥಾನವನ್ನು ತಲುಪಿದ್ದೇವೆ, ಆದ್ದರಿಂದ ವೀಡಿಯೊ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ನಾಯಿಯನ್ನು ದೇವಸ್ಥಾನಕ್ಕೆ ಕೊಂಡೊಯ್ಯಲು Instagram ನಲ್ಲಿ ಅನೇಕ ಬಳಕೆದಾರರು ಬ್ಲಾಗರ್ ಅನ್ನು ಬೆಂಬಲಿಸಿದ್ದಾರೆ.