ನಿಧಾನಗತಿಯಲ್ಲಿ ಕೋವಿಡ್ ಲಸಿಕೆ ವಿತರಣೆ: ತ್ವರಿತಗೊಳಿಸಲು ಅಭಿಯಾನ ನಡೆಸುವಂತೆ ಕೇಂದ್ರ ಸೂಚನೆ
ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ನೀಡಿಕೆ ಪ್ರಮಾಣ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು ಶುಕ್ರವಾರ ತ್ವರಿತಗತಿಯಲ್ಲಿ ಲಸಿಕೆ ವಿತರಣೆ ಮಾಡಲು ಅಭಿಯಾನ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
Published: 20th May 2022 09:48 PM | Last Updated: 20th May 2022 09:48 PM | A+A A-

ಮಕ್ಕಳಿಗೆ ಕೋವಿಡ್ ಲಸಿಕೆ
ನವದೆಹಲಿ: ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ನೀಡಿಕೆ ಪ್ರಮಾಣ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು ಶುಕ್ರವಾರ ತ್ವರಿತಗತಿಯಲ್ಲಿ ಲಸಿಕೆ ವಿತರಣೆ ಮಾಡಲು ಅಭಿಯಾನ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕಳೆದ ಹಲವು ವಾರಗಳಿಂದ ಇಳಿಮುಖವಾಗುತ್ತಿರುವ ಸಂಖ್ಯೆಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಲಸಿಕೆ ನೀಡಿಕೆ ವ್ಯಾಪ್ತಿಯನ್ನು ವೇಗಗೊಳಿಸಲು ದೇಶಾದ್ಯಂತ ಜೂನ್‌ನಿಂದ ಎರಡು ತಿಂಗಳ ಅವಧಿಯ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಮನೆ-ಮನೆ ಅಭಿಯಾನ 'ಹರ್ ಘರ್ ದಸ್ತಕ್ 2.0' ಸಂಪೂರ್ಣ ಅರ್ಹ ಜನಸಂಖ್ಯೆಯನ್ನು ಮೊದಲ, ಎರಡನೆಯ ಮತ್ತು ಬೂಸ್ಟರ್ ಡೋಸ್‌ಗಳೊಂದಿಗೆ ಒಳಗೊಳ್ಳುತ್ತದೆ ಎಂದು ಹೇಳಿದೆ.
18-59 ವರ್ಷ ವಯಸ್ಸಿನ ಜನರಿಗೆ ನೀಡಲಾಗುತ್ತಿರುವ ಬೂಸ್ಟರ್ ಡೋಸ್‌ಗಳ ನೀಡಿಕೆ ಪ್ರಮಾಣ ತುಂಬಾ ಕಳಪೆಯಾಗಿದೆ ಮತ್ತು 12-14 ವಯಸ್ಸಿನವರಿಗೆ ಕೋವಿಡ್ -19 ಲಸಿಕೆಗಳು ಇನ್ನೂ ಬಯಸಿದ ವೇಗವನ್ನು ತಲುಪಿಲ್ಲ. ಇಲ್ಲಿಯವರೆಗೆ, ಸುಮಾರು 192 ಕೋಟಿ ಕೋವಿಡ್-19 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಆದರೆ ಏಪ್ರಿಲ್ 10 ರಿಂದ ಎಲ್ಲಾ ವಯಸ್ಕರಿಗೆ ಪಾವತಿಸಿದ ಬೂಸ್ಟರ್ ಡೋಸ್‌ಗಳನ್ನು ಪ್ರಾರಂಭಿಸಿದಾಗಿನಿಂದ 18-59 ವರ್ಷ ವಯಸ್ಸಿನ 17 ಲಕ್ಷಕ್ಕಿಂತ ಕಡಿಮೆ ಜನರು ಬೂಸ್ಟರ್ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. ಈ ವರೆಗೂ 12-14 ವರ್ಷ ವಯಸ್ಸಿನ ಸುಮಾರು 1.3 ಕೋಟಿ ಮಕ್ಕಳಿಗೆ ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.
ರಾಜ್ಯಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ವಿದೇಶ ಪ್ರವಾಸಕ್ಕಾಗಿ ಬೂಸ್ಟರ್ ಡೋಸ್ ಪಡೆಯಲು ಬಯಸುವವರಿಗೆ ವಿದೇಶಿ ಪ್ರಯಾಣದ ಪುರಾವೆಗಳನ್ನು ಕೇಳುವ ಅಗತ್ಯವಿಲ್ಲ ಎಂದು ರಾಜ್ಯಗಳಿಗೆ ತಿಳಿಸಿದರು. 'ವಿದೇಶಕ್ಕೆ ಪ್ರಯಾಣಿಸುವವರು ತಮ್ಮ ಎರಡನೇ ಡೋಸ್‌ನಿಂದ ಮೂರು ತಿಂಗಳುಗಳನ್ನು ಪೂರ್ಣಗೊಳಿಸಿದರೆ, ಪ್ರಯಾಣದ ದೇಶದ ಅವಶ್ಯಕತೆಗೆ ಅನುಗುಣವಾಗಿ ಅವರ ಮೂರನೇ ಅಥವಾ ಬೂಸ್ಟರ್ ಡೋಸ್ ಗಳನ್ನು ಸ್ವೀಕರಿಸಲು ಕೇಂದ್ರವು ನಿಯಮಗಳನ್ನು ಸಡಿಲಗೊಳಿಸಿದೆ. ಇತರರಿಗೆ, ಎರಡನೇ ಮತ್ತು ಮೂರನೇ ಡೋಸ್ ನಡುವಿನ ಒಂಬತ್ತು ತಿಂಗಳ ಅಂತರವು ಉಳಿದಿದೆ. ಅವಧಿ ಮುಗಿಯುವ ಮೊದಲು ಲಸಿಕೆ ಬಾಟಲಿಗಳನ್ನು ಬಳಸುವ ಮೂಲಕ ಕೋವಿಡ್ -19 ಲಸಿಕೆ ವ್ಯರ್ಥವಾಗುವುದನ್ನು ತಡೆಯಬೇಕು ಭೂಷಣ್ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಎಲ್ಲಾ ಅರ್ಹ ಫಲಾನುಭವಿಗಳ ಸರಿಯಾದ ಪಟ್ಟಿಗಳ ಆಧಾರದ ಮೇಲೆ ಸೂಕ್ಷ್ಮ ಯೋಜನೆಗಳೊಂದಿಗೆ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಕೈಗೊಳ್ಳಲು ರಾಜ್ಯಗಳನ್ನು ಒತ್ತಾಯಿಸಲಾಗಿದೆ.