ಜ್ಞಾನವಾಪಿ ಮಸೀದಿಯ ಶಿವಲಿಂಗ ಬಗ್ಗೆ ಫೇಸ್ ಬುಕ್ ಫೋಸ್ಟ್: ಬಂಧಿತ ಪ್ರಾಧ್ಯಾಪಕರಿಗೆ ಜಾಮೀನು ಮಂಜೂರು
ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಹಕ್ಕುಗಳನ್ನು ಪ್ರಶ್ನಿಸುವ ಬಗ್ಗೆ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಫೋಸ್ಟ್ ಹಾಕಿ ಕಳೆದ ರಾತ್ರಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್ ಅವರಿಗೆ ಜಾಮೀನು ಮಂಜೂರಾಗಿದೆ.
Published: 21st May 2022 08:32 PM | Last Updated: 21st May 2022 08:33 PM | A+A A-

ರತನ್ ಲಾಲ್
ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಹಕ್ಕುಗಳನ್ನು ಪ್ರಶ್ನಿಸುವ ಬಗ್ಗೆ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಫೋಸ್ಟ್ ಹಾಕಿ ಕಳೆದ ರಾತ್ರಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್ ಅವರಿಗೆ ಜಾಮೀನು ಮಂಜೂರಾಗಿದೆ.
ಫೇಸ್ ಬುಕ್ ಫೋಸ್ಟ್ ನ್ನು ವಿಡಂಬನೆಯ ವಿಫಲ ಯತ್ನ ಎಂದು ಕರೆದ ನ್ಯಾಯಾಲಯ, ಒಬ್ಬ ವ್ಯಕ್ತಿ ಅನುಭವಿಸುವ ನೋವಿನ ಭಾವನೆ ಇಡೀ ಗುಂಪು ಅಥವಾ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಆದಾಗ್ಯೂ, ಪ್ರಸ್ತುತ ಎಫ್ ಐಆರ್ ಗೆ ಕಾರಣವಾದ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಮಾಜಿಕ ಮಾಧ್ಯಮ ಫೋಸ್ಟ್ ಗಳು ಅಥವಾ ಸಂದರ್ಶನ ನೀಡುವುದು ಅಥವಾ ಅದನ್ನು ಫೋಸ್ಟ್ ಮಾಡುವಂತಿಲ್ಲ ಎಂದು ರತನ್ ಲಾಲ್ ಗೆ ಆದೇಶಿಸಿದೆ.
ರತನ್ ಲಾಲ್ ಅವರನ್ನು ಬಂಧಿಸಿದ್ದ ಉತ್ತರ ದೆಹಲಿಯ ಸೈಬರ್ ಪೊಲೀಸ್ ಠಾಣೆಯ ಪೊಲೀಸರು, ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ ಎಂದು ಆರೋಪಿಸಿದ್ದರು. ಇಂದು ಮಧ್ಯಾಹ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪ್ರಕರಣದ ತನಿಖೆಗಾಗಿ ಲಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿ ಪೊಲೀಸರು ಕೋರಿದ್ದರು. ಆದರೆ, ಅವರ ಕೋರಿಕೆ ಮನ್ನಿಸದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.