ಮೇ 24ಕ್ಕೆ ಕ್ವಾಡ್ ರಾಷ್ಟ್ರಗಳ ಶೃಂಗ ಸಭೆ: ಜಪಾನ್'ಗೆ ಪ್ರಧಾನಿ ಮೋದಿ ಭೇಟಿ, 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಭಾಗಿ
ಜಪಾನ್‌ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
Published: 22nd May 2022 09:58 AM | Last Updated: 22nd May 2022 09:58 AM | A+A A-

ಪ್ರಧಾನಿ ಮೋದಿ
ನವದೆಹಲಿ: ಜಪಾನ್‌ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಇಂಡೊ-ಪೆಸಿಫಿಕ್ ವಲಯದ ಅಭಿವೃದ್ಧಿ ಮತ್ತು ಪ್ರಚಲಿತ ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಕ್ವಾಡ್ ನಾಯಕರಿಗೆ ಈ ಶೃಂಗಸಭೆ ವೇದಿಕೆ ಒದಗಿಸಲಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಶೃಂಗಸಭೆ ನೇಪಥ್ಯದಲ್ಲಿ ಮೋದಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ಪ್ರಧಾನಮಂತ್ರಿಗಳ ಜತೆ ಸಭೆ ಸೇರಿದಂತೆ ಒಟ್ಟು 40 ಗಂಟೆಗಳ ಅವಧಿಯಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆಂದು ಸಚಿವಾಲಯ ತಿಳಿಸಿದೆ.
ಕ್ವಾಡ್ ಶೃಂಗ ಎಂದರೆ ಕ್ವಾಡ್ರಿಲೇಟರಲ್ ಸೆಕ್ಯುರಿಟಿ ಡೈಲಾಗ್. ಚತುರ್ಭುಜ ಶೃಂಗ ಎಂದು ಕರೆಯಲಾಗುತ್ತದೆ. ಆಸ್ಪ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಎಂಬ ನಾಲ್ಕು ಪ್ರಜಾಪ್ರಭುತ್ವ ರಾಷ್ಟ್ರಗಳ ಗುಂಪು ಇದಾಗಿದೆ. ಕ್ವಾಡ್ ಕಲ್ಪನೆಯನ್ನು 2007ರಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಪ್ರಸ್ತಾಪಿಸಿದರು. ಚೀನಾದ ಒತ್ತಡದಿಂದಾಗಿ ಆಸ್ಪ್ರೇಲಿಯಾವು ಇದರಿಂದ ಹಿಂದೆ ಸರಿದ ಕಾರಣ ಈ ಕಲ್ಪನೆಯು ಮುಂದುವರೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 2017ರಲ್ಲಿ ಈ ನಾಲ್ಕು ದೇಶಗಳು ಈ ಒಕ್ಕೂಟ ರಚಿಸಿದವು. ಈ ನಾಲ್ಕು ರಾಷ್ಟ್ರಗಳು ಅಡೆತಡೆಯಿಲ್ಲದ ಕಡಲ ವ್ಯಾಪರಾ, ಭದ್ರತೆಯ ಸಾಮಾನ್ಯ ಹಿತಾಸಕ್ತಿಯನ್ನು ಬೆಂಬಲಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಹೊಂದಿವೆ.