ನಮ್ಮ ಸರ್ಕಾರ ಬಂದ ಮೇಲೆ ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಂತಿದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಂತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Published: 23rd May 2022 11:06 AM | Last Updated: 23rd May 2022 11:06 AM | A+A A-

ಯೋಗಿ ಅದಿತ್ಯನಾಥ್
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಂತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಖನೌನಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ್ದು, ಉತ್ತರ ಪ್ರದೇಶದಲ್ಲಿ ರಾಮನವಿ ಆಚರಣೆ ವೇಳೆ ಒಂದೇ ಒಂದು ಮತೀಯ ಗಲಭೆ ಉಂಟಾಗಿಲ್ಲ. ಉತ್ತರ ಪ್ರದೇಶದಲ್ಲಿ ಭಾರೀ ವಿಜೃಂಭನೆಯಿಂದ ರಾಮ ನವಮಿ ಆಚರಣೆ ಮಾಡಲಾಗುತ್ತದೆ. ರಾಜ್ಯದ ಎಲ್ಲೂ ಹಿಂಸಾಚಾರ ನಡೆದಿಲ್ಲ. ಉತ್ತರ ಪ್ರದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈದ್ ನಮಾಜ್ ಹಾಗೂ ಅಲ್ವಿದಾ ಜುಮಾ (ರಂಜಾನ್ ತಿಂಗಳ ಕೊನೆಯ ಶುಕ್ರವಾರದ ಪ್ರಾರ್ಥನೆ) ರಸ್ತೆಯಲ್ಲಿ ನಡೆದಿಲ್ಲ. ಈದ್ನ ವೇಳೆಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವ ಪರಿಪಾಠ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿಂತಿದೆ ಎಂದು ಹೇಳಿದರು.
'2017 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಒಂದೇ ಒಂದು ಕೋಮು ಗಲಭೆ ಆಗಿಲ್ಲ. ಈ ಹಿಂದೆ ಮುಜಾಫ್ಫರನಗರ, ಮೇರಠ್, ಮೊರದಾಬಾದ್ ಹಾಗೂ ಇತರ ಪ್ರದೇಶಗಳಲ್ಲಿ ಕೋಮು ಗಲಭೆಗಳು ನಡೆಯುತ್ತಿದ್ದವು. ತಿಂಗಳಾನು ಗಟ್ಟಲೆ ಕರ್ಫ್ಯೂ ಜಾರಿಯಲ್ಲಿ ಇರುತ್ತಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಕೋಮು ಗಲಭೆ ಉಂಟಾಗಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಕ್ರಮ ಕಸಾಯಿಕಾನೆಗಳನ್ನು ಮುಚ್ಚಲಾಗಿದೆ. ರಾಜ್ಯಾದ್ಯಂತ ಪಶುಗಳ ಆರೋಗ್ಯ ಹಾಗೂ ಸುರಕ್ಷತೆಗೆ ನಾವು ಗೋಶಾಲೆ ನಿರ್ಮಾಣ ಮಾಡಿದ್ದೇವೆ. ಧಾರ್ಮಿಕ ಕಟ್ಟಡಗಳಲ್ಲಿ ಅಳವಡಿಸಲಾಗಿದ್ದ ಲೌಡ್ ಸ್ಪೀಕರ್ ಅನ್ನೂ ಕೂಡ ನಾವು ತೆರವುಗೊಳಿಸಿದ್ದೇವೆ. ನಮ್ಮ ಸರ್ಕಾರ 700 ಕ್ಕೂ ಅಧಿಕ ಧಾರ್ಮಿಕ ಸ್ಥಳಗಳನ್ನು ಮರು ನಿರ್ಮಾಣ ಮಾಡಿದೆ' ಎಂದು ಅವರು ಹೇಳಿದರು.