ಭಾರತ ತೇಜಸ್ ಸರಣಿ ಜೊತೆಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಕಡೆ ಗಮನ ಹರಿಸಬಹುದೇ?
ತೇಜಸ್ ಎಂಕೆ2, ತೇಜಸ್ ಎಂಕೆ1 ಹಾಗೂ ತೇಜಸ್ ಎಂಕೆ1ಎಯ ಹೊಸ ಪ್ರಬೇಧವಾಗಿದೆ. ಭಾರತೀಯ ವಾಯುಸೇನೆ ಈ ಮೊದಲಿನ ವಿಮಾನಗಳಲ್ಲಿ ಸೂಚಿಸಿದ್ದ ಲೋಪದೋಷಗಳನ್ನು ತಿದ್ದಿಕೊಳ್ಳಲು ಈ ಹೊಸ ಯುದ್ಧ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.
Published: 28th May 2022 03:28 PM | Last Updated: 28th May 2022 03:28 PM | A+A A-

Tejas
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕೆಲಸದಲ್ಲಿ ತಾನು ತೆಗೆದುಕೊಂಡ ಗಡುವನ್ನು ಮೀರುವುದು ಇದೇನು ಹೊಸದಲ್ಲ. ಅದಕ್ಕೆ ಎಚ್‌ಎಎಲ್ ನೀಡಬಹುದಾದ ಕಾರಣಗಳು ನಿಜವೇ ಆಗಿರಬಹುದಾದರೂ ಕೆಲಸದಲ್ಲಿ ತಡ ಆಗುತ್ತಿರುವುದು ಒಪ್ಪಿಕೊಳ್ಳಬೇಕಾದ ಸತ್ಯ. ಎಚ್‌ಎಎಲ್ 2022ರ ಆಗಸ್ಟ್ - ಸೆಪ್ಟೆಂಬರ್‌ನಲ್ಲಿ ಮೊದಲ ಹಾರಾಟಕ್ಕೆ ತಯಾರಿಸಬೇಕಾಗಿದ್ದ ತೇಜಸ್ ಮಾರ್ಕ್ 2 ಆ ವೇಳೆಗೆ ತಯಾರಾಗದೆ, 2023ಕ್ಕೆ ಮುಂದೂಡಬಹುದು ಎಂಬ ವದಂತಿಗಳು ಈಗ ಹರಿದಾಡುತ್ತಿವೆ. ಆ ಬಳಿಕ ವಿಮಾನದ ಉತ್ಪಾದನೆ ಬಹುತೇಕ 2025ರಲ್ಲಿ ಆರಂಭಗೊಳ್ಳಬಹುದು.
ಈ ಎಲ್ಲಾ ಅಡೆತಡೆಗಳನ್ನು ಹೊರತುಪಡಿಸಿದರೂ, ಈ ತೇಜಸ್ ಮಾರ್ಕ್ 2 ಯುದ್ಧವಿಮಾನ ಭಾರತಕ್ಕೆ ಹೆಮ್ಮೆ ತರುವ ವಿಮಾನವಾಗಿದೆ. ಭಾರತದಲ್ಲೇ ತಯಾರಾಗುತ್ತಿರುವ ಈ ಸ್ವದೇಶಿ ಯುದ್ಧ ವಿಮಾನ ಜಗತ್ತಿನ ಹಲವು ಅತ್ಯುತ್ತಮ ವಿಮಾನಗಳ ಸಾಲಿಗೆ ಸೇರಲಿದೆ. ಪ್ರಸ್ತುತ ಉಕ್ರೇನ್ ಎದುರಿಸುತ್ತಿರುವ ಪರಿಸ್ಥಿತಿಯನ್ನು ಗಮನಿಸಿದಾಗ, ರಕ್ಷಣಾ ವಿಚಾರದಲ್ಲಿ ಸ್ವಾವಲಂಬಿಯಾಗಲು ಭಾರತ ತನ್ನ ಯೋಜನೆಗಳನ್ನು ಇನ್ನಷ್ಟು ವೇಗವಾಗಿಸುವ ಅನಿವಾರ್ಯತೆ ಇದೆ. ಹಾಗಂದ ಮಾತ್ರಕ್ಕೆ ಭಾರತ ತಂತ್ರಜ್ಞಾನದಲ್ಲಿ ಇದ್ದಕ್ಕಿದ್ದ ಹಾಗೆ ಅಮೆರಿಕ , ಚೀನಾ, ಇಸ್ರೇಲ್ ಅಥವಾ ರಷ್ಯಾಗಳ ಜೊತೆ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಒಂದು ದಶಕದ ಹಿಂದೆ ಭಾರತ ಸೇನೆ ಆಧುನೀಕರಣಕ್ಕೆ ಸಮಯ ಹಾಗೂ ಹಣವನ್ನು ಮೀಸಲಿಡಲು ಹಿಂದೇಟು ಹಾಕುತ್ತಿತ್ತು. ಆದರೆ ಈಗ ಆತ್ಮನಿರ್ಭರ ಭಾರತ ಮಂತ್ರದಡಿ ಪರಿಸ್ಥಿತಿ ಬದಲಾಗುತ್ತಿದೆ.
ವರ್ಷಗಳ ಕಾಲ ಭಾರತದ ನೀತಿಯಲ್ಲಿ ಬದಲಾವಣೆಯಾಗಿದ್ದರೆ ಈಗಾಗಲೆ ನಮ್ಮ ಲಘು ಯುದ್ಧ ವಿಮಾನಗಳು (ಎಲ್‌ಸಿಎ) ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುತ್ತಿದ್ದವು. ಭಾರತ ಸರ್ಕಾರ ಎಲ್‌ಸಿಎಗಳ ತಯಾರಿಕೆಗೆ 1983ರಲ್ಲಿ ಒಪ್ಪಿಗೆ ಸೂಚಿಸಿತು. ಈ ಯುದ್ಧ ವಿಮಾನಗಳು ಆಗಲೇ ಅವಧಿ ಮೀರಿ ಹಾರಾಟ ನಡೆಸುತ್ತಿದ್ದ ಹಳೆಯ ರಷ್ಯಾ ನಿರ್ಮಿತ ಮಿಗ್–21ಎಸ್ ಯುದ್ಧವಿಮಾನಗಳ ಬದಲಿಗೆ ಕಾರ್ಯ ನಿರ್ವಹಿಸಬೇಕಾಗಿತ್ತು. ಆದರೆ ಎಲ್‌ಸಿಎಯ ಮೊದಲ ಮಾದರಿ ಆಕಾಶಕ್ಕೇರಿದ್ದು 2001ರಲ್ಲಿ. ಮೊದಲ ದೇಶೀ ನಿರ್ಮಿತ ಜೆಟ್ ಇಂಜಿನ್‌ಗಾಗಿ ಭಾರತದ ಹುಡುಕಾಟ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಭಾರತೀಯ ವಾಯುಪಡೆ ಮೊದಲ ವಿಮಾನವನ್ನು 2013ರಲ್ಲಿ ಖರೀದಿಸಿತು. ಅದು 2019ರ ವೇಳೆಗೆ ಚಾಲನೆಗೆ ಬರಬೇಕಾಗಿತ್ತು. 2021ರಲ್ಲಿ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ 83 ತೇಜಸ್ ಎಲ್‌ಸಿಎಗಳ ಖರೀದಿಗೆ 48,000 ಕೋಟಿ ರೂಗಳನ್ನು ವೆಚ್ಚ ಮಾಡಲು ಅನುಮತಿ ನೀಡಿತು. ಇದರಲ್ಲಿ 73 ಮಾರ್ಕ್ 2ಎ ಹಾಗೂ ಇನ್ನುಳಿದಂತೆ 10 ಎಲ್‌ಸಿಎ ಟ್ರೈನರ್ ಜೆಟ್‌ಗಳು ಸೇರಿದ್ದವು.
ತೇಜಸ್ ಮಾರ್ಕ್ 2 ಬೆಂಗಳೂರು ಮೂಲದ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಏಡಿಎ) ಹಾಗೂ ಎಚ್‌ಎಲ್ ಜಂಟಿಯಾಗಿ ವಿನ್ಯಾಸಗೊಳಿಸಿದ್ದವು. ಈ 4.5ನೇ ತಲೆಮಾರಿನ ತೇಜಸ್ ಜಗತ್ತಿನ ನಾಲಕ್ಕು ಅತ್ಯುತ್ತಮ ಎಲ್‌ಸಿಎಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಹೊಸ ಸರಣಿಯ ಎಲ್‌ಸಿಎಗಳ ಕುರಿತು ಸಾಕಷ್ಟು ಚರ್ಚೆಗಳು ನಡೆದು ಬಂದಿವೆ. ಮುಂಬರುವ ವರ್ಷಗಳಲ್ಲಿ ತೇಜಸ್ ಎಂಕೆ2ರ ಏಳು ಸ್ಕ್ವಾಡ್ರನ್‌ಗಳು ಸೇವೆಗಿಳಿಯಲಿವೆ ಎಂದು ವರದಿಗಳು ಬಂದಿವೆ. ಇವುಗಳನ್ನು ವಾಯುಪಡೆಗೆ ಸೂಕ್ತವಾಗಿಸುವ ನಿಟ್ಟಿನಲ್ಲಿ ಸಾಕಷ್ಟು ತಾಂತ್ರಿಕ ವಿಮರ್ಷೆಗಳನ್ನೂ ಪೂರ್ಣಗೊಳಿಸಲಾಗಿದೆ.
ತೇಜಸ್ ಎಂಕೆ2 ಯಾಕೆ ಗಂಭೀರವಾಗಿ ಪರಿಗಣಿಸಬೇಕು? ಇದು ತೇಜಸ್ ಎಂಕೆ1 ಹಾಗೂ ತೇಜಸ್ ಎಂಕೆ1ಎಯ ಹೊಸ ಪ್ರಬೇಧವಾಗಿದೆ. ಭಾರತೀಯ ವಾಯುಸೇನೆ ಈ ಮೊದಲಿನ ವಿಮಾನಗಳಲ್ಲಿ ಸೂಚಿಸಿದ್ದ ಲೋಪದೋಷಗಳನ್ನು ತಿದ್ದಿಕೊಳ್ಳಲು ಈ ಹೊಸ ಯುದ್ಧ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ಎಲ್‌ಸಿಎ ಸರಣಿಯಲ್ಲಿ ತೇಜಸ್ ಎಂಕೆ2 ಅಭಿವೃದ್ಧಿಪಡಿಸುವ ಕಾರ್ಯ 2009ರಲ್ಲೇ ಆರಂಭಗೊಂಡಿತ್ತು. ಆದರೆ ಇಷ್ಟು ವರ್ಷಗಳ ಅವಧಿಯಲ್ಲಿ ವಿಮಾನದ ವಿನ್ಯಾಸ ಸಾಕಷ್ಟು ಬದಲಾವಣೆಗಳನ್ನು ಕಂಡು, ಈಗ ಮೀಡಿಯಂ ವೆಯ್ಟ್ ಫೈಟರ್ (ಎಂಡಬ್ಲ್ಯೂಎಫ್) ಆಗಿ ರೂಪುಗೊಂಡಿದೆ. ತೇಜಸ್ ಮಾರ್ಕ್ 1ಎಯಲ್ಲಿ ಬಳಸಲಾದ ವಿದೇಶಿ ನಿರ್ಮಿತ ಉಪಕರಣಗಳನ್ನು ಮಾರ್ಕ್2ರಲ್ಲಿ ಸ್ವದೇಶಿ ನಿರ್ಮಾಣದ ಉಪಕರಣಗಳ ಮೂಲಕ ಬದಲಾಯಿಸಲಾಗಿದೆ. ಎಚ್‌ಎಎಲ್ 25% ಮೀರದಂತೆ ಕಾರ್ಯಗಳನ್ನು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆಯಾಗಿ ನೀಡಿದೆ.
ಈ ನೂತನ ತೇಜಸ್ ಯುದ್ಧ ವಿಮಾನ 6,500 ಕೆಜಿ ತನಕ ತೂಕ ಹೊತ್ತೊಯ್ಯುಬಲ್ಲದು. ಇದರ ಆಯುಧ ಹೊರುವ ಸಾಮರ್ಥ್ಯ ತೇಜಸ್ ಎಲ್‌ಸಿಎಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಉತ್ತಮ್ ಆಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಎಸ್‌ಇಎ) ರೇಡಾರ್ ಹಾಗೂ ಇನ್ಫ್ರಾರೆಡ್ ವ್ಯವಸ್ಥೆ ಅಳವಡಿಸಲಾಗಿದೆ. ಈ ರೇಡಾರ್ ಸಂಪೂರ್ಣವಾಗಿ ದೇಶೀ ನಿರ್ಮಿತವಾಗಿದೆ. ಉತ್ತಮ್ ರೇಡಾರ್ ತೇಜಸ್ ಎಲ್‌ಸಿಎಗಳಲ್ಲಿರುವ ಇಸ್ರೇಲ್ ನಿರ್ಮಿತ ರೇಡಾರ್‌ಗಳಿಗಿಂತಲೂ ಹೆಚ್ಚು ಸಮರ್ಥ ಎನ್ನಲಾಗುತ್ತದೆ. ಈ ಸುಧಾರಿತ ದೇಶೀ ನಿರ್ಮಿತ ರೇಡಾರ್ ವ್ಯವಸ್ಥೆ ಶತ್ರುವಿನ ಇಲೆಕ್ಟ್ರಾನಿಕ್ ಯುದ್ಧ ತಂತ್ರಗಳನ್ನೂ ಪತ್ತೆ ಹಚ್ಚಿ, ನಾಶಪಡಿಸುತ್ತದೆ.
ಈ ಜೆಟ್‌ನಲ್ಲಿರುವ ಇನ್ನೊಂದು ಆಧುನಿಕತೆ ಎಂದರೆ ಇದರಲ್ಲಿರುವ ಆಮ್ಲಜನಕ ಉತ್ಪಾದನಾ ವ್ಯವಸ್ಥೆ. ಇದರೊಡನೆ ಈ ಯುದ್ಧ ವಿಮಾನ ಬೃಹತ್ ಆಯುಧಗಳನ್ನು ಹೊರಬಲ್ಲದಾಗಿದ್ದು, ಸತತವಾಗಿ ಆರೋಗ್ಯ ಹಾಗೂ ಪ್ರಸರಣ ವ್ಯವಸ್ಥೆಯನ್ನು ಮೇಲ್ವಿಚಾರಣೆಗೊಳಪಡಿಸಲಾಗುತ್ತದೆ. ಅದರೊಡನೆ 50 ಸೆಮೀ x 20 ಸೆಮೀ ಅಳತೆಯ ಉತ್ಕೃಷ್ಟ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಇವಿಷ್ಟೇ ಅಲ್ಲದೆ ಮತ್ತಷ್ಟು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ತೇಜಸ್ ಮಾರ್ಕ್ 2, ಸ್ವೀಡನ್ನಿನ ಸಾಬ್ ಜೆಎಸ್ 39 ಇ/ಎಫ್ ಗ್ರಿಪೆನ್, ಚೀನಾದ ಚೆಂಗ್ಡು ಜೆ–10 ಹಾಗೂ ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ನಿರ್ಮಿಸಿರುವ ಜೆಎಫ್–17 ಯುದ್ಧ ವಿಮಾನಗಳೊಡನೆ ಸ್ಪರ್ಧಿಸಬಲ್ಲದು. ಒಂದು ವೇಳೆ ಭಾರತ ಸರ್ಕಾರ ಈ ತೇಜಸ್ ಸರಣಿಯ ಹೊಸ ವಿಮಾನಗಳಿಗೆ ಹೆಚ್ಚಿನ ಗಮನ ನೀಡಿದರೆ, ಭಾರತವೂ ಸಹ ಚೀನಾದೊಡನೆ ಸ್ಪರ್ಧೆಗಳಿದು, ರಫ್ತು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ.
ಆದರೆ ಭಾರತೀಯ ವಾಯುಪಡೆ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ, ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಎಂಬ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪಡೆದುಕೊಳ್ಳಬೇಕು ಎಂದೂ ಹಲವರು ಸಲಹೆ ಮಾಡುತ್ತಾರೆ. ಎಎಂಸಿಎ ಎಂದರೆ ಈ ಯುದ್ಧ ವಿಮಾನಗಳು ಶತ್ರುಗಳ ರೇಡಾರ್‌ಗೆ ಕಾಣಿಸಿಕೊಳ್ಳದೆ ಚಲಿಸುತ್ತವೆ. ರೇಡಾರ್‌ಗಳಿಗೆ ಸ್ಟೆಲ್ತ್ ಯುದ್ಧ ವಿಮಾನಗಳನ್ನು ಬಲುದೂರದಿಂದ ಗುರುತಿಸುವುದು ಬಹಳ ಕಷ್ಟ. ಆದರೆ ತೇಜಸ್ ಮಾರ್ಕ್ 2 ಒಂದು ಸ್ಟೆಲ್ತ್ ಯುದ್ಧ ವಿಮಾನವಲ್ಲ. ಎಎಂಸಿಎ 5ನೇ ತಲೆಮಾರಿನ ಯುದ್ಧ ವಿಮಾನವಾಗಿದೆ.
ವೆಚ್ಚದ ಕುರಿತಾಗಿ ನೋಡುವುದಾದರೆ ಭಾರತದಲ್ಲೇ ನಿರ್ಮಾಣವಾಗುತ್ತಿರುವ ಯುದ್ಧ ವಿಮಾನವಾದರೂ ತೇಜಸ್ ಮಾರ್ಕ್ 2 ದುಬಾರಿ ವಿಮಾನವೇ. ಒಂದು ಅಂದಾಜಿನ ಪ್ರಕಾರ ಪ್ರತಿಯೊಂದು ವಿಮಾನಕ್ಕೂ ಕನಿಷ್ಠ ಎಂದರೂ ನೂರು ಮಿಲಿಯನ್ ಡಾಲರ್ ವೆಚ್ಚ ತಗುಲುತ್ತದೆ ಎಂದು ಅಂದಾಜಿಸಲಾಗಿದೆ. ಈ ವೆಚ್ಚವನ್ನು ಗ್ರಿಪೆನ್ ಜೊತೆ ಹೋಲಿಸಬಹುದು. ಅಥವಾ ಇದರ ವೆಚ್ಚ ಗ್ರಿಪೆನ್‌ಗಿಂತಲೂ ಕೊಂಚ ಹೆಚ್ಚಾಗಬಹುದು ಎನ್ನಲಾಗಿದೆ. ಮಾರ್ಕ್ 2 ಭಾರತೀಯ ವಾಯುಪಡೆಯನ್ನು ಸೇರಲು ಕನಿಷ್ಠ ಇನ್ನೂ ಹತ್ತು ವರ್ಷಗಳ ಕಾಲ ಬೇಕಾಗುತ್ತದೆ. ಆ ಸಮಯದಲ್ಲಿ ಮಾರ್ಕ್ 2 ಜಗತ್ತಿನಲ್ಲಿರುವ ಅತ್ಯುತ್ತಮ ಯುದ್ಧ ವಿಮಾನಗಳಿಂದ ಕಡಿಮೆ ಎಂದರೂ ಒಂದು ತಲೆಮಾರು ಹಿಂದಿರುತ್ತದೆ. ವರದಿಗಳ ಪ್ರಕಾರ ಚೀನಾದ ಬಳಿ ಈಗಾಗಲೇ ಎರಡು ಐದನೇ ತಲೆಮಾರಿನ ಯುದ್ಧ ವಿಮಾನಗಳಿವೆ. ಹಾಗೆಂದು ಭಾರತ ಎಲ್‌ಸಿಎ ಯೋಜನೆಗೆ ಹಣ ವೆಚ್ಚ ಮಾಡಿಲ್ಲ ಎನ್ನಲೂ ಸಾಧ್ಯವಿಲ್ಲ. ಅದು ಈಗಾಗಲೇ ಖಜಾನೆಗೆ ರೂ.10,000 ಕೋಟಿ ವೆಚ್ಚ ತಗುಲುವಂತೆ ಮಾಡಿದೆ. 83 ಮಾರ್ಕ್ 1 ವಿಮಾನಗಳಿಗೆ ತಗುಲುವ ವೆಚ್ಚ 45,000 ಕೊಟಿ ರೂಗಳಾಗಲಿವೆ.
ಇನ್ನೂ ಕೆಲವು ವಾದಗಳ ಪ್ರಕಾರ, ಭಾರತ ತೇಜಸ್ ಮಾರ್ಕ್ 2 ತಯಾರಿಕೆಗೆ ತಗಲುವ ವೆಚ್ಚ ಹಾಗೂ ಸಮಯವನ್ನು ಗಮನಿಸಿ, ಎಎಂಸಿಎಗಳ ತಯಾರಿಕೆಗೆ ಹಣ ವೆಚ್ಚ ಮಾಡಬೇಕು. ಮಾರ್ಕ್ 2 ಇನ್ನು ದಶಕವೊಂದರಲ್ಲಿ ತಯಾರಾಗಿ, ಇನ್ನು 13–15 ವರ್ಷಗಳ ಬಳಿಕ ಮಿಗ್–29 ಜಾಗ್ವಾರ್ ಹಾಗೂ ಮಿರೇಜ್ ಯುದ್ಧ ವಿಮಾನಗಳ ಸ್ಥಾನ ತುಂಬುತ್ತವೆ. ಆ ಸಮಯದಲ್ಲಿ ವಾಯುಪಡೆಗೆ ನಾಲಕ್ಕನೇ ತಲೆಮಾರಿನ ವಿಮಾನವನ್ನು ಸೇರಿಸುವುದು ಅಷ್ಟು ಸೂಕ್ತ ನಿರ್ಧಾರವಲ್ಲ ಎಂದೂ ಅಭಿಪ್ರಾಯಗಳಿವೆ. ಈಗಾಗಲೇ ಚೀನಾ, ಅಮೆರಿಕಾ ಹಾಗೂ ರಷ್ಯಾಗಳ ಬಳಿ ಅತ್ಯಂತ ಆಧುನಿಕ ಯುದ್ಧ ವಿಮಾನಗಳಿರುವುದರಿಂದ ಭಾರತಕ್ಕೂ ಐದನೇ ತಲೆಮಾರಿನ ವಿಮಾನಗಳ ಅಗತ್ಯವಿರುವುದೂ ಸುಳ್ಳಲ್ಲ.
ಸರ್ಕಾರದ ಆದ್ಯತೆಗಳನ್ನು ಯಾರು ಬದಲಾಯಿಸಲು ಸಾಧ್ಯ? ಈ ಸಾಮರ್ಥ್ಯ ಇರುವುದು ಭಾರತೀಯ ವಾಯುಸೇನೆಗೆ ಮಾತ್ರ. ಎಲ್‌ಸಿಎ ಯೋಜನೆಗೆ ಹೆಚ್ಚು ಒತ್ತು ನೀಡಿದ ಪರಿಣಾಮವಾಗಿ ಎಎಂಸಿಎಗೆ ಹೆಚ್ಚಿನ ಆದ್ಯತೆ ಇಲ್ಲಿಯ ತನಕ ನೀಡಲಾಗಿಲ್ಲ. ಮಾರ್ಚ್ 2022ರ ವೇಳೆ ಎಚ್‌ಎಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಮಾಧವನ್ ಅವರು ಎಎಂಸಿಎ ಯೋಜನಾ ಪಾಲುದಾರರಾದ ಎಡಿಎ ಹಾಗೂ ಎಚ್‌ಎಎಲ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತೀಯ ನಿರ್ಮಾಣದ ಐದನೇ ತಲೆಮಾರಿನ ಯದ್ಧ ವಿಮಾನದಲ್ಲಿ ಸ್ಟೆಲ್ತ್, ಆಂತರಿಕ ಆಯುಧಗಳು, ಸೂಪರ್ ಕ್ರೂಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳು ಇರಲಿವೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಡಿಆರ್‌ಡಿಓ, ಎಚ್‌ಎಎಲ್ ಹಾಗೂ ಖಾಸಗಿ ಹೂಡಿಕೆದಾರರನ್ನು ಒಳಗೊಂಡಂತೆ ಒಂದು ಸ್ಪೆಷಲ್ ಪರ್ಪಸ್ ವೆಹಿಕಲ್ ನಿರ್ಮಿಸಲಾಗುವುದು ಎಂದಿದ್ದಾರೆ ಆರ್ ಮಾಧವನ್.
ಎಎಂಸಿಎ ನಿರ್ಮಾಣದ ಕೆಲಸ ಈಗಾಗಲೇ ಆರಂಭವಾಗಿದ್ದು, ಡಿಆರ್‌ಡಿಓ ಮೊದಲ ಮೂಲ ಮಾದರಿ ನಿರ್ಮಾಣಕ್ಕೆ ಚಾಲನೆ ನೀಡಿದೆ. ಮಾರ್ಚ್ 2022ರಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವರಾದ ರಾಹುಲ್ ಭಟ್ ಅವರು ರಾಜ್ಯಸಭೆಯಲ್ಲಿ ಮಾತನಾಡಿ, ಐದನೇ ತಲೆಮಾರಿನ ಯುದ್ಧ ವಿಮಾನಗಳು ನಾಲ್ಕನೇ ತಲೆಮಾರಿನ ಯುದ್ಧ ವಿಮಾನಗಳಿಗಿಂತ ಹೆಚ್ಚು ವೆಚ್ಚದಾಯಕ ಎಂದಿದ್ದಾರೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಇದು ಭಾರತದಲ್ಲೇ ತಯಾರಾಗುವುದರಿಂದ ಇದರ ವೆಚ್ಚ ಕಡಿಮೆ ಇರಬಹುದು. ಭಾರತ ಐದನೇ ತಲೆಮಾರಿನ ಯುದ್ಧ ವಿಮಾನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡುವ ಸಮಯದಲ್ಲಿ ಅದೂ ಒಂದು ತಲೆಮಾರು ಹಳೆಯದಾಗುವ ಸಾಧ್ಯತೆಗಳಿವೆ. ಹಾಗಾಗಿ ಭಾರತ ಯಾವಾಗಲು ಸ್ಟೆಲ್ತ್ ಹಾಗು ಸ್ಟೆಲ್ತ್ ಅಲ್ಲದ ಯುದ್ಧ ವಿಮಾನಗಳ ತಯಾರಿಯಲ್ಲಿ ಯಾವತ್ತೂ ಒಂದು ತಲೆಮಾರು ಹಿಂದೆ ಉಳಿದುಬಿಡುವ ಸಾಧ್ಯತೆಯಿದೆ.
ಸಚಿವರ ಮಾತಿನ ಪ್ರಕಾರ, ತೇಜಸ್ ಮಾರ್ಕ್ 2 ಬಳಕೆಗೆ ಲಭ್ಯವಾದಾಗ ಭಾರತ ಅದನ್ನು ಉಪಯೋಗಿಸುವುದು ಒಂದು ಉತ್ತರವಾಗಿದೆ. ಭಾರತದಂತಹಾ ದೇಶದಲ್ಲಿ ರಕ್ಷಣೆಗಾಗಿ ಅತಿಹೆಚ್ಚಿನ ಹಣ ವೆಚ್ಚ ಮಾಡುವುದು ಯಾವತ್ತೂ ಒಂದು ಸವಾಲಾಗೇ ಇರುತ್ತದೆ. ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ವರದಿಯ ಪ್ರಕಾರ ಭಾರತ ರಕ್ಷಣಾ ವೆಚ್ಚಕ್ಕೆ ಅತಿಹೆಚ್ಚು ಮೊತ್ತ ಖರ್ಚು ಮಾಡುವ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತ 2021ರಲ್ಲಿ ರಕ್ಷಣೆಗೆ 76.6 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಇದು 2020ಕ್ಕೆ ಹೋಲಿಸಿದರೆ 0.9% ಹಾಗೂ 2012ರಿಂದ 33% ಹೆಚ್ಚಾಗಿದೆ. ಭಾರತ ಈ ಅತಿಹೆಚ್ಚು ವೆಚ್ಚ ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಅಮೆರಿಕಾ ಹಾಗೂ ಚೀನಾ ಭಾರತಕ್ಕಿಂತ ಅತಿಹೆಚ್ಚು ಹಣವನ್ನು ವೆಚ್ಚ ಮಾಡುತ್ತವೆ. ಅಮೆರಿಕಾದ ರಕ್ಷಣಾ ವೆಚ್ಚ 2021ರಲ್ಲಿ 801 ಬಿಲಿಯನ್ ಡಾಲರ್ ಆಗಿದ್ದರೆ, ಚೀನಾದ ರಕ್ಷಣಾ ವೆಚ್ಚ 293 ಬಿಲಿಯನ್ ಡಾಲರ್ ಆಗಿತ್ತು.
ಹಾಗಂದ ಮಾತ್ರಕ್ಕೆ ಭಾರತವನ್ನು ಚೀನಾ ಮತ್ತು ಅಮೆರಿಕಾದೊಡನೆ ಹೋಲಿಸುವುದು ಕಿತ್ತಳೆ ಹಣ್ಣನ್ನು ಸೇಬಿಗೆ ಹೋಲಿಸಿದಂತಾದೀತು. ಭಾರತ ಆ ಹಂತಕ್ಕೆ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಹಾಗೆಂದು ಭಾರತ ಸ್ವದೇಶಿ ಉತ್ಪಾದನೆಯಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರೆ, ಅತಿಯಾದ ಖರ್ಚನ್ನು ಕಡಿತಗೊಳಿಸಲು ಸಾಧ್ಯ.
