ಪಿಎಫ್ಐ ಮೆರವಣಿಗೆ ಪ್ರಚೋದನಕಾರಿ ಘೋಷಣೆ ಕೂಗಿದ ಬಾಲಕ ಆತನ ತಂದೆಯನ್ನು ವಶಕ್ಕೆ ಪಡೆದ ಕೇರಳ ಪೊಲೀಸರು!
ಕೆಲವು ದಿನಗಳ ಹಿಂದೆ ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Published: 28th May 2022 04:29 PM | Last Updated: 28th May 2022 07:30 PM | A+A A-

ಪ್ರತ್ಯಕ್ಷ ದೃಶ್ಯ
ಕೊಚ್ಚಿ: ಕೆಲವು ದಿನಗಳ ಹಿಂದೆ ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೆರವಣಿಗೆ ವೇಳೆ ವ್ಯಕ್ತಿಯ ಭುಜದ ಮೇಲೆ ಕುಳಿತು ಬಾಲಕ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದು ಬಾಲಕನ ಪೋಷಕರ ವಿವರಗಳನ್ನು ಸಂಗ್ರಹಿಸಲು ಕೊಚ್ಚಿಯಲ್ಲಿ ಮೊಕ್ಕಾಂ ಹೂಡಿದ್ದ ಆಲಪ್ಪುಳದ ಪೊಲೀಸ್ ತಂಡವು ಬಾಲಕ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕನನ್ನು ಕೌನ್ಸೆಲಿಂಗ್ಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕೊಚ್ಚಿಯಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಬಾಲಕನ ಕುಟುಂಬವನ್ನು ಪಲ್ಲೂರುತಿಯಲ್ಲಿ ಪತ್ತೆ ಹಚ್ಚಿದ್ದರೂ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದ್ದರಿಂದ ಯಾರನ್ನೂ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ರಾತ್ರಿಯಷ್ಟೇ ಕುಟುಂಬಸ್ಥರು ಮನೆಗೆ ಮರಳಿದ್ದರು.
ಕುಟುಂಬವು ವಿಹಾರಕ್ಕೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕನ ತಂದೆಯನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಬಾಲಕನ ಮನೆ ಮುಂಭಾಗದ ರಸ್ತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.