
ಸಂಗ್ರಹ ಚಿತ್ರ
ಮಾಂಡ್ಲಾ: ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದ ಜಾತ್ರೆಯಲ್ಲಿ ಪಾನಿ ಪುರಿ ತಿಂದ 97 ಮಕ್ಕಳು ಅಸ್ವಸ್ಥರಾಗಿದ್ದರೂ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 38 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ಶನಿವಾರ ಸಂಜೆ ಅದೇ ಅಂಗಡಿಯಲ್ಲಿದ್ದ ಮಸಾಲೆ ತಿಂಡಿಯನ್ನು ಸಂತ್ರಸ್ತರೆಲ್ಲರೂ ಸೇವಿಸಿದ್ದು, ಸಮೀಪದ ವಿವಿಧ ಗ್ರಾಮಗಳ ಜನರು ಖರೀದಿಗೆ ಆಗಮಿಸಿದ್ದರು ಎಂದು ಅವರು ಹೇಳಿದರು.
ರಾತ್ರಿ 7.30ರ ಸುಮಾರಿಗೆ ಮಕ್ಕಳಿಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್ ಶಾಕ್ಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಷಾಹಾರ ಸೇವನೆಯಿಂದ 97 ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. 'ಪಾನಿ ಪುರಿ' ಮಾರಾಟಗಾರನನ್ನು ಬಂಧಿಸಲಾಗಿದೆ. ತಿಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಡ್ಲಾದ ಸಂಸದ, ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.