
ಕಮಲ್ ನಾಥ್
ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಿಎಂ ಕಮಲ್ ನಾಥ್ ನೀಡಿರುವ ಹೇಳಿಕೆ ರಾಜಕೀಯವಾಗಿ ವಿವಾದದ ಕಿಡಿ ಹೊತ್ತಿಸಿದೆ. "ನಾನು ಹೆಮ್ಮೆಯ ಹಿಂದೂ, ಆದರೆ ಮೂಢನಲ್ಲ" ಎಂದು ಕಮಲ್ ನಾಥ್ ಹೇಳಿಕೆ ನೀಡಿದ್ದರು.
ಮಧ್ಯಪ್ರದೇಶದಿಂದ ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ವಿವೇಕ್ ತನ್ಖಾ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವುದಕ್ಕೂ ಒಂದು ದಿನ ಮುನ್ನ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಟ್ಟದ ಅಡ್ವೊಕೇಟ್ ಗಳೊಂದಿಗೆ ಮಾತನಾಡಿದ್ದ ವೇಳೆ ಕಮಲ್ ನಾಥ್ ಈ ಹೇಳಿಕೆ ನೀಡಿದ್ದರು.
"ನಾನು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತೇನೆ, ಆದರೆ ನಾನು ಮೂಢನಲ್ಲ, ನಮಗೆ ಧರ್ಮ ಎಂದಿಗೂ ರಾಜಕಾರಣದ ಆಧಾರವಲ್ಲ. ಧರ್ಮ ನಮ್ಮ ಭಾವನೆಗಳೊಂದಿಗೆ ಬೆಸೆದಿದ್ದು ನಮ್ಮ ವೈಯಕ್ತಿಕ ಕುಟುಂಬಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂಬ ಅರ್ಥ ಬರುವ ಹೇಳಿಕೆ ನೀಡಿದ್ದರು.
ತಾವು ಕೆಲವು ವರ್ಷಗಳ ಹಿಂದೆ ತಮ್ಮ ಸಂಸತ್ ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಛಿಂದ್ವಾರದಲ್ಲಿ ಬೃಹತ್ ಹನುಮಾನ್ ವಿಗ್ರಹವನ್ನೊಳಗೊಂಡ ದೇವಾಲಯವನ್ನು ನಿರ್ಮಿಸಿದ್ದಾಗ ಅದಕ್ಕೆ ರಾಜಕೀಯ ಕಾರ್ಯಕ್ರಮದ ರೀತಿ ಪ್ರಚಾರ ಪಡೆದುಕೊಳ್ಳಲಿಲ್ಲ ಎಂಬುದನ್ನೂ ಕಮಲ್ ನಾಥ್ ಈ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು
ಕಮಲ್ ನಾಥ್ ಅವರ ಈ ಹೇಳಿಕೆ ಈಗ ಆಡಳಿತಾರೂಢವಾಗಿರುವ ಬಿಜೆಪಿಗೆ ಆಹಾರವಾಗಿದ್ದು, ಬಿಜೆಪಿ ಅಥವಾ ರಾಜ್ಯ ಸರ್ಕಾರ ಕಮಲ್ ನಾಥ್ ಅವರನ್ನು ಮೂಢ ಎಂದು ಎಂದಿಗೂ ಭಾವಿಸಿಲ್ಲ. ಬಹುಶಃ ಪಕ್ಷದ ಆಂತರಿಕ ವಿಷಯಗಳಿಂದಾಗಿ ಕಮಲ್ ನಾಥ್ ಈ ರೀತಿಯ ಅನಗತ್ಯ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.
ನಾವು ಹೇಳುತ್ತಿರುವುದೇನೆಂದರೆ ಹಿಂದೂ ಆಗಿರುವುದರ ಬಗ್ಗೆ ವಿವರಣೆ ನೀಡಲು ಅವರು ಆಯ್ಕೆ ಮಾಡಿಕೊಂಡ ವೇದಿಕೆ ಸೂಕ್ತವಲ್ಲ ಎಂಬುದಷ್ಟೇ ನಮ್ಮ ಆಕ್ಷೇಪ. ಕಮಲ್ ನಾಥ್ ಆಗಿರಲಿ ಅಥವಾ ರಾಹುಲ್ ಗಾಂಧಿಯಾಗಿರಲಿ, ಅವರು ಚುನಾವಣೆ ಹಿಂದೂಗಳು (ಚುನಾವಣೆ ಬಂದಾಗ ಹಿಂದೂಗಳಷ್ಟೇ) ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಿವಾರ ಹಾಕುತ್ತಾರೆ ಅಥವಾ ತಿಲಕ ಇಡುತ್ತಾರೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಕಮಲ್ ನಾಥ್ ಇಚ್ಛಾಧಾರಿ ಹಿಂದೂ ಆಗಿದ್ದು, ರಾಮ ಸೇತು ವಿಷಯವಾಗಿ ಮೌನವಾಗಿರುತ್ತಾರೆ, ಅವರ ಸ್ನೇಹಿತ ದಿಗ್ವಿಜಯ್ ಸಿಂಗ್ ರಾಮ ಮಂದಿರ ಶಂಕುಸ್ಥಾಪನೆ ದಿನಾಂಕವನ್ನು ಪ್ರಶ್ನಿಸಿದಾಗ ಮೌನವಾಗಿರುತ್ತಾರೆ. 1984 ರಲ್ಲಿ ಸಿಖ್ ನರಮೇಧವಾದಾಗ ಮೌನವಾಗಿರುತ್ತಾರೆ. ಗ್ಯಾನವಾಪಿ ಕಾಶಿ ವಿಶ್ವನಾಥ ಮಂದಿರದ ವಿಷಯವಾಗಿಯೂ ಮೌನವಾಗಿರುತ್ತಾರೆ ಎಂದು ಮಿಶ್ರಾ ಟೀಕಿಸಿದ್ದಾರೆ.