ಮೋರ್ಬಿ ಸೇತುವೆ ಕುಸಿತ: ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದ ವಕೀಲರ ಸಂಘ
135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ಕುಸಿತ ಪ್ರಕರಣದ ವಿಚಾರವಾಗಿ ತಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತ್‌ನ ವಕೀಲರ ಸಂಘ ಘೋಷಣೆ ಮಾಡಿದೆ.
Published: 02nd November 2022 02:41 PM | Last Updated: 02nd November 2022 03:19 PM | A+A A-

ಸೇತುವೆ ಕುಸಿದು ಬಿದ್ದಿರುವುದು.
ಅಹ್ಮದಾಬಾದ್: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ಕುಸಿತ ಪ್ರಕರಣದ ವಿಚಾರವಾಗಿ ತಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತ್‌ನ ವಕೀಲರ ಸಂಘ ಘೋಷಣೆ ಮಾಡಿದೆ.
ಪ್ರಕರಣದಲ್ಲಿ ಬಂಧಿತರಾದ ಒಂಬತ್ತು ಆರೋಪಿಗಳನ್ನು ತಮ್ಮ ಸಂಘದ ಯಾವುದೇ ವಕೀಲರು ಪ್ರತಿನಿಧಿಸುವುದಿಲ್ಲ ಎಂದು ಗುಜರಾತ್‌ನ ಎರಡು ವಕೀಲರ ಸಂಸ್ಥೆಗಳು ನಿರ್ಧರಿಸಿವೆ.
ಇದನ್ನೂ ಓದಿ: ಮೋರ್ಬಿ ಸೇತುವೆ ದುರಸ್ತಿ ಮಾಡಿದ ಗುತ್ತಿಗೆದಾರರು ಆ ಕೆಲಸಕ್ಕೆ ಅರ್ಹರಾಗಿರಲಿಲ್ಲ: ನ್ಯಾಯಾಲಯಕ್ಕೆ ತಿಳಿಸಿದ ಪ್ರಾಸಿಕ್ಯೂಷನ್
"ಮೊರ್ಬಿ ಬ್ರಿಡ್ಜ್ ಕುಸಿತ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು (ಒರೆವಾ ಕಂಪನಿಯ) ಬಂಧಿಸಲಾಗಿದೆ. ಮೊರ್ಬಿ ಬಾರ್ ಅಸೋಸಿಯೇಷನ್ ಮತ್ತು ರಾಜ್‌ಕೋಟ್ ಬಾರ್ ಅಸೋಸಿಯೇಷನ್ ಈ ಪ್ರಕರಣದಲ್ಲಿ ಆರೋಪಿಗಳ ಪ್ರಕರಣವನ್ನು ವಕಾಲತ್ತಿಗೆ ತೆಗೆದುಕೊಳ್ಳದಿರಲು ಮತ್ತು ಅವರನ್ನು ಪ್ರತಿನಿಧಿಸದಿರಲು ನಿರ್ಧರಿಸಿದೆ. ಎರಡೂ ವಕೀಲರ ಸಂಘಗಳು ಈ ನಿರ್ಣಯವನ್ನು ಒಕ್ಕೋರಲಿನಿಂದ ಅಂಗೀಕರಿಸಿವೆ ಎಂದು ಮೊರ್ಬಿ ಬಾರ್ ಅಸೋಸಿಯೇಷನ್ ನ ಹಿರಿಯ ವಕೀಲ ಎಸಿ ಪ್ರಜಾಪತಿ ಹೇಳಿದರು.
ಪೊಲೀಸರು ಸೋಮವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಅಪರಾಧ ನರಹತ್ಯೆ ಕೊಲೆಯಲ್ಲ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏತನ್ಮಧ್ಯೆ, ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತದ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನವೆಂಬರ್ 14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಗುಜರಾತ್: ಮೊರ್ಬಿ ಸೇತುವೆ ನಿರ್ವಹಣಾ ಸಂಸ್ಥೆಯ ಕಚೇರಿ ಸೀಲ್
ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಮೊರ್ಬಿಯ ಮಚ್ಚು ನದಿಯ ಮೇಲೆ ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆಯನ್ನು ವ್ಯಾಪಕ ದುರಸ್ತಿ ಮತ್ತು ನವೀಕರಣದ ನಂತರ ಐದು ದಿನಗಳ ಹಿಂದೆ ಮತ್ತೆ ತೆರೆಯಲಾಗಿತ್ತು. ಆದರೆ ಅಕ್ಟೋಬರ್ 30ರ ಸಂಜೆ 6.30ರ ಸುಮಾರಿಗೆ ಸೇತುವೆ ಕುಸಿದು ಬಿದ್ದಾಗ ಜನರಿಂದ ಕಿಕ್ಕಿರಿದು ತುಂಬಿತ್ತು. ಈ ದುರ್ಘಟನೆಯಲ್ಲಿ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.