ಸೈರಸ್ ಮಿಸ್ತ್ರಿ ಸಾವು: ಡಾ.ಅನಾಹಿತಾ ಪಾಂಡೋಲೆ ವಿರುದ್ಧ ಕೇಸ್ ದಾಖಲು
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಎರಡು ತಿಂಗಳ ನಂತರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಶನಿವಾರ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಾಂಡೋಲೆ...
Published: 05th November 2022 07:14 PM | Last Updated: 05th November 2022 07:14 PM | A+A A-

ಸೈರಸ್ ಮಿಸ್ತ್ರಿ ಅಪಘಾತಕ್ಕೀಡಾದ ಕಾರು
ಮುಂಬೈ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಎರಡು ತಿಂಗಳ ನಂತರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಶನಿವಾರ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಾಂಡೋಲೆ ಅವರ ವಿರುದ್ಧ ಅಜಾಗರೂಕ ಚಾಲನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೋಟಾರು ವಾಹನ ಕಾಯಿದೆಯ ಹೊರತಾಗಿ ಭಾರತೀಯ ದಂಡ ಸಂಹಿತೆ 304(ಎ) (ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣವಾಗುವುದು), 279 (ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ ಚಾಲನೆ), 337 (ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಪ್ರಕರಣ ಕಸ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಸೈರಸ್ ಮಿಸ್ತ್ರಿ ಕಾರು ಅಪಘಾತ: ಕಾರು ಚಲಾಯಿಸುತ್ತಿದ್ದ ಡಾ. ಅನಾಹಿತಾ ಪಾಂಡೋಲೆಗೆ ಶಸ್ತ್ರಚಿಕಿತ್ಸೆ
ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರು ಸೆಪ್ಟೆಂಬರ್ 4, 2022 ರಂದು ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಸೂರ್ಯ ನದಿಯ ಸೇತುವೆಯ ಮೇಲೆ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಇಬ್ಬರು ಮರ್ಸಿಡಿಸ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.
ಕಾರು ಚಲಾಯಿಸುತ್ತಿದ್ದ ಮುಂಬೈನ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಪತಿ ಡೇರಿಯಸ್ ಪಾಂಡೋಲೆ ಗಂಭೀರವಾಗಿ ಗಾಯಗೊಂಡಿದ್ದರು.