ಜಿ20 ಶೃಂಗಸಭೆ: ಮೂರು ಪ್ರಮುಖ ಚರ್ಚೆಗಳಲ್ಲಿ ಪ್ರಧಾನಿ ಮೋದಿ ಭಾಗಿ
ನವೆಂಬರ್ 15 ರಿಂದ 16 ರ ವರೆಗೆ ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯ ವಿಷಯಗಳ ಕುರಿತ...
Published: 13th November 2022 08:08 PM | Last Updated: 13th November 2022 08:08 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ನವೆಂಬರ್ 15 ರಿಂದ 16 ರ ವರೆಗೆ ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯ ವಿಷಯಗಳ ಕುರಿತ ಮೂರು ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಭಾನುವಾರ ತಿಳಿಸಿದ್ದಾರೆ.
ಉಕ್ರೇನ್ ಸಂಘರ್ಷ ಮತ್ತು ಅದರ ಪರಿಣಾಮಗಳನ್ನು ಒಳಗೊಂಡಂತೆ, ಜಾಗತಿಕ ಸವಾಲುಗಳ ಕುರಿತು ಜಿ20 ಶೃಂಗಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಆಸಿಯಾನ್ ಶೃಂಗಸಭೆ: ಜೈಶಂಕರ್ - ಬ್ಲಿಂಕನ್ ಭೇಟಿ; ಉಕ್ರೇನ್ ಯುದ್ಧ, ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಚರ್ಚೆ
ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಂಡೋನೇಷ್ಯಾದ ಬಾಲಿಗೆ ಮೂರು ದಿನಗಳ ಭೇಟಿಗಾಗಿ ತೆರಳಲಿದ್ದಾರೆ ಎಂದು ಕ್ವಾತ್ರಾ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕತೆ, ಇಂಧನ, ಪರಿಸರ, ಡಿಜಿಟಲ್ ರೂಪಾಂತರ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮೋದಿ ಅವರು ಇತರ ನಾಯಕರ ಜೊತೆ ಚರ್ಚಿಸಲಿದ್ದಾರೆ ಎಂದು ಕ್ವಾತ್ರಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಜರ್ಮನ್ ಚಾನ್ಸೆಲರ್ ಒಲಾಫ್ ಸ್ಕಾಲ್ಜ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾಗವಹಿಸಲಿದ್ದಾರೆ.