ಕೋಲ್ಕತ್ತಾದ ಬಂಗಲೆಯಲ್ಲಿ ಮಹಿಳೆಗೆ ಮತ್ತು ಬರುವ ಪಾನೀಯ ನೀಡಿ ನಾಲ್ವರಿಂದ ಅತ್ಯಾಚಾರ
ಕೋಲ್ಕತ್ತಾದ ಉತ್ತರ ಹೊರವಲಯ ರಾಜರ್‌ಹತ್‌ನಲ್ಲಿರುವ ಬಂಗಲೆಯಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ 21 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ.
Published: 14th November 2022 04:47 PM | Last Updated: 14th November 2022 08:10 PM | A+A A-

ಪ್ರಾತಿನಿಧಿಕ ಚಿತ್ರ
ಕೋಲ್ಕತ್ತಾ: ಕೋಲ್ಕತ್ತಾದ ಉತ್ತರ ಹೊರವಲಯ ರಾಜರ್‌ಹತ್‌ನಲ್ಲಿರುವ ಬಂಗಲೆಯಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ 21 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಪಾರ್ಟಿಯಲ್ಲಿ ಮತ್ತು ಬರುವ ಪಾನೀಯವನ್ನು ನೀಡಿ ಪ್ರಜ್ಞೆ ತಪ್ಪಿದ ನಂತರ ನಾಲ್ವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಶುಕ್ರವಾರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, 'ಗುರುವಾರ ರಾತ್ರಿ ವೇದಿಕ್ ಗ್ರಾಮದಲ್ಲಿ ನಡೆದ ಪಾರ್ಟಿಗೆ ನನ್ನ ಸ್ನೇಹಿತೆ ಆಹ್ವಾನ ನೀಡಿದ್ದಳು. ಆಕೆ ಆರೋಪಿಗಳಲ್ಲಿ ಒಬ್ಬನಿಗೆ ಸ್ನೇಹಿತೆಯಾಗಿದ್ದಳು. ಪಾರ್ಟಿಯಲ್ಲಿ ಮಹಿಳೆಯರು ಸೇರಿದಂತೆ 10 ಕ್ಕೂ ಹೆಚ್ಚು ಜನರಿದ್ದರು. ಈ ವೇಳೆ ನಾಲ್ವರು ಪುರುಷರು ನನಗೆ ಮತ್ತು ಬರುವ ಪಾನೀಯವನ್ನು ನೀಡಿದ ನಂತರ ಸರದಿಯಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ರಾತ್ರಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ಅರಿತ ಆಕೆ ಶುಕ್ರವಾರ ಬೆಳಗ್ಗೆ ಸ್ಥಳದಿಂದ ತೆರಳಿದ್ದಳು. ಕೂಡಲೇ ಶುಕ್ರವಾರ ರಾತ್ರಿ ದೂರು ದಾಖಲಿಸಿದ್ದಾಳೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ಬಂಧಿಸಿ ಉತ್ತರ 24 ಪರಗಣದ ಬರಸಾತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
'ಬಂಗಲೆ ಮತ್ತು ರೆಸಾರ್ಟ್‌ನ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳ ಬಳಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ತನಿಖಾಧಿಕಾರಿಗಳು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ' ಎಂದು ಬಿಧಾನನಗರ ಪೊಲೀಸ್ ಕಮಿಷನರ್ ಗೌರವ್ ಶರ್ಮಾ ಹೇಳಿದರು.