ಗಂಭೀರ ಸ್ಥಿತಿಯಲ್ಲಿದ್ದ ಸೇತುವೆ ಬಳಕೆಗೆ ಅವಕಾಶ ನೀಡಿದ್ದೇಕ್ಕೆ? ಮೊರ್ಬಿ ಪುರಸಭೆಗೆ ಹೈಕೋರ್ಟ್ ತರಾಟೆ

ಮೊರ್ಬಿ ತೂಗು ಸೇತುವೆ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದಿದ್ದರೂ ಅದನ್ನು ದುರಸ್ತಿಗೂ ಮುನ್ನ ಅಂದರೆ ಡಿಸೆಂಬರ್ 29, 2021 ಮತ್ತು ಮಾರ್ಚ್ 7, 2022 ರ ನಡುವೆ ಜನರ ಬಳಕೆಗೆ ಅನುಮತಿ ನೀಡಿದ್ದು ಏಕೆ? ಎಂದು ಗುಜರಾತ್...
ಮೊರ್ಬಿ ಸೇತುವೆ
ಮೊರ್ಬಿ ಸೇತುವೆ

ಅಹಮದಾಬಾದ್: ಮೊರ್ಬಿ ತೂಗು ಸೇತುವೆ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದಿದ್ದರೂ ಅದನ್ನು ದುರಸ್ತಿಗೂ ಮುನ್ನ ಅಂದರೆ ಡಿಸೆಂಬರ್ 29, 2021 ಮತ್ತು ಮಾರ್ಚ್ 7, 2022 ರ ನಡುವೆ ಜನರ ಬಳಕೆಗೆ ಅನುಮತಿ ನೀಡಿದ್ದು ಏಕೆ? ಎಂದು ಗುಜರಾತ್ ಹೈಕೋರ್ಟ್ ಬುಧವಾರ ಮೊರ್ಬಿ ಪುರಸಭೆಯನ್ನು ತರಾಟೆಗೆ ತೆಗೆದುಕೊಂಡಿದೆ.

135 ಮಂದಿಯನ್ನು ಬಲಿ ಪಡೆದ ಮೊರ್ಬಿ ಸೇತುವೆಯ ದುರಂತಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿರುವ ಹೈಕೋರ್ಟ್, ಘಟನೆಯ ಬಗ್ಗೆ ಮೊರ್ಬಿ ಪುರಸಭೆಯಿಂದ ಮಾಹಿತಿ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಶಾಸ್ತ್ರಿ ಅವರ ವಿಭಾಗೀಯ ಪೀಠ, ಯಾವುದೇ ಅನುಮೋದನೆ ಇಲ್ಲದಿದ್ದರೂ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ (ಒರೆವಾ ಗ್ರೂಪ್)ಗೆ ಸೇತುವೆ ಬಳಕೆಗೆ ಅನುಮತಿ ನೀಡಲು ಕಾರಣಗಳು ಏನು? ಎಂದು ಕೇಳಿದೆ.

ಅಹಮದಾಬಾದ್ ಮೂಲದ ಒರೆವಾ ಸಮೂಹವು ಮೊರ್ಬಿ ತೂಗು ಸೇತುವೆಯನ್ನು ನಿರ್ವಹಿಸುತ್ತಿತ್ತು ಮತ್ತು ನಿರ್ವಹಣೆ ಮಾಡುತ್ತಿತ್ತು.

ಮೊರ್ಬಿ ಸೇತುವೆಯ ಸ್ಥಿತಿ ಗಂಭೀರವಾಗಿದೆ ಎಂದು 2021ರ ಡಿಸಂಬರ್‌ 29ರಂದು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿಗೆ ಮಾಹಿತಿ ನೀಡಿದ್ದ ಅಜಂತಾ, ಸೇತುವೆಯ ನಿರ್ವಹಣೆ ಕುರಿತು ಒಪ್ಪಂದದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿತ್ತು ಎಂದು ಪುರಸಭೆಯು ಬುಧವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ.

ಇಷ್ಟೆಲ್ಲ ಮಾಹಿತಿ ಇದ್ದರೂ ಸೇತುವೆ ಬಳಕೆಗೆ ಅಜಂತಾ ಕಂಪನಿಗೆ ಅನುಮತಿ ನೀಡಿದ ಕುರಿತ ಪ್ರಮಾಣ ಪತ್ರ ಸಲ್ಲಿಸುವಂತೆ ಪೀಠವು ಮೊರ್ಬಿ ಪುರಸಭೆಗೆ ಸೂಚಿಸಿದೆ. ಅಲ್ಲದೆ ಮುಂದಿನ ವಿಚಾರಣೆ ವೇಳೆ ಪುರಸಭೆಯ ಮುಖ್ಯ ಅಧಿಕಾರಿ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನಿರ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com