ಹೈದರಾಬಾದ್ ನಲ್ಲಿ ವಿಷಾನಿಲ ಸೋರಿಕೆ
ಹೈದರಾಬಾದ್ ನಲ್ಲಿ ವಿಷಾನಿಲ ಸೋರಿಕೆ

ಹೈದರಾಬಾದ್ ನಲ್ಲಿ ವಿಷಾನಿಲ ಸೋರಿಕೆ: 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಎನ್ ಡಿಆರ್ ಎಫ್ ನಿಂದ ಕಾರ್ಯಾಚರಣೆ!

ನೆರೆಯ ತೆಲಂಗಾಣದಲ್ಲಿ ಮತ್ತೊಂದು ವಿಷಾನಿಲ ಸೋರಿಕೆ ಪ್ರಕರಣ ವರದಿಯಾಗಿದ್ದು, ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್: ನೆರೆಯ ತೆಲಂಗಾಣದಲ್ಲಿ ಮತ್ತೊಂದು ವಿಷಾನಿಲ ಸೋರಿಕೆ ಪ್ರಕರಣ ವರದಿಯಾಗಿದ್ದು, ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನಗರದ ಪಶ್ಚಿಮ ಮರೇಡಪಲ್ಲಿಯಲ್ಲಿರುವ ಕಸ್ತೂರ್ಬಾ ಸರ್ಕಾರಿ ಕಾಲೇಜಿನಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಸುಮಾರು ಹತ್ತು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಕೂಡಲೇ ಕಾಲೇಜು ಸಿಬ್ಬಂದಿ ಅವರನ್ನು ಗಾಂಧಿ ಆಸ್ಪತ್ರೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಾಲೇಜಿನ ಲ್ಯಾಬ್‌ನಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಮಾಹಿತಿ ತಿಳಿಯುತ್ತಲೇ ಅಗ್ನಿಶಾಮಕ, ಪೊಲೀಸ್ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೇಲ್ನೋಟಕ್ಕೆ ಕಸ್ತೂರಬಾ ಸರ್ಕಾರಿ ಕಾಲೇಜಿನ ಲ್ಯಾಬ್‌ನಿಂದಲೇ ರಾಸಾಯನಿಕ ಅನಿಲ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು, ಅನಿಲ ಸೋರಿಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಯಾವ ಅನಿಲ ಸೋರಿಕೆಯಾಗಿದೆ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಕಾಲೇಜಿನ ವಿದ್ಯಾರ್ಥಿಗಳು ಉಸಿರಾಟದ ತೊಂದರೆಯಿಂದ ದೂರಿದ ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ವಿಜ್ಞಾನ ಪ್ರಯೋಗಾಲಯದಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ನಂತರ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕನಿಷ್ಠ 10-15 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದು ಅನಿಲ ಸೋರಿಕೆಯೇ ಅಥವಾ ಇನ್ನಾವುದೇ ಸಮಸ್ಯೆಯೇ ಎಂಬ ಬಗ್ಗೆ ವಿಪತ್ತು ನಿರ್ವಹಣಾ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಸದ್ಯ ಕಾಲೇಜಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಹಿಂದೆ 2020ರ ಮೇ ತಿಂಗಳಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಭೀಕರ ವಿಷಾನಿಲ ಸೋರಿಕೆಯಾಗಿತ್ತು. ವಿಶಾಖಪಟ್ಟಣಂ ನಲ್ಲಿರುವ ಎಲ್‌ಜಿ ಪಾಲಿಮರ್ಸ್ ಇಂಡಸ್ಟ್ರಿ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಕನಿಷ್ಟ 8 ಜನರು ಸಾವನ್ನಪ್ಪಿದ್ದರು.

Related Stories

No stories found.

Advertisement

X
Kannada Prabha
www.kannadaprabha.com