ಗುಜರಾತ್ ಚುನಾವಣೆಗೆ ದಿನಗೂಲಿ ಕಾರ್ಮಿಕ ಸ್ಪರ್ಧೆ, ಆಯೋಗಕ್ಕೆ 10 ಸಾವಿರ ರೂ. ಠೇವಣಿ, ಎಲ್ಲಾ 1 ರೂ. ನಾಣ್ಯಗಳೇ!
2019 ರಲ್ಲಿ ಗಾಂಧಿನಗರದಲ್ಲಿ ತನ್ನ ಸ್ಲಮ್ ಕಾಲೋನಿ ನೆಲಸಮವಾಗುವುದಕ್ಕೆ ಸಾಕ್ಷಿಯಾಗಿದ್ದ ಗುಜರಾತ್ ನ ದಿನಗೂಲಿ ಕಾರ್ಮಿಕ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣಾ ಆಯೋಗಕ್ಕೆ ಠೇವಣಿ ಹಣವನ್ನು ಪಾವತಿಸಿದ್ದಾರೆ.
Published: 19th November 2022 05:29 PM | Last Updated: 19th November 2022 05:29 PM | A+A A-

ಒಂದು ರೂಪಾಯಿ ನಾಣ್ಯ (ಸಂಗ್ರಹ ಚಿತ್ರ)
ಅಹ್ಮದಾಬಾದ್: 2019 ರಲ್ಲಿ ಗಾಂಧಿನಗರದಲ್ಲಿ ತನ್ನ ಸ್ಲಮ್ ಕಾಲೋನಿ ನೆಲಸಮವಾಗುವುದಕ್ಕೆ ಸಾಕ್ಷಿಯಾಗಿದ್ದ ಗುಜರಾತ್ ನ ದಿನಗೂಲಿ ಕಾರ್ಮಿಕ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣಾ ಆಯೋಗಕ್ಕೆ ಠೇವಣಿ ಹಣವನ್ನು ಪಾವತಿಸಿದ್ದಾರೆ.
ಈ ದಿನಗೂಲಿ ಕಾರ್ಮಿಕ ಮಹೇಂದ್ರ ಪಾಟ್ನಿ ತನ್ನ ಬೆಂಬಲಿಗರಿಂದ 1 ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ 10 ಸಾವಿರ ರೂಪಾಯಿ ಠೇವಣಿ ಹಣವನ್ನು ಪಾವತಿಸಿದ್ದಾರೆ.
ಮಹೇಂದ್ರ ಪಾಟ್ನಿ, ಗಾಂಧಿನಗರ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಗಾಂಧಿನಗರದ ಮಹಾತ್ಮ ಮಂದಿರದ ಬಳಿ ಇರುವ ಸ್ಲಮ್ ನಲ್ಲಿದ್ದ 521 ಗುಡಿಸಲುಗಳ ನಿವಾಸಿಗಳು ತಮ್ಮನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದರು ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
2010 ರಲ್ಲಿ ದಂಡಿ ಕುಟೀರ್ ಮ್ಯೂಸಿಯಮ್ ನಿರ್ಮಾಣಕ್ಕೆ ಹಾಗೂ 2019 ರಲ್ಲಿ ಹೋಟೆಲ್ ನಿರ್ಮಾಣಕ್ಕಾಗಿ ಎರಡು ಬಾರಿ ಈ ಸ್ಲಮ್ ನಿವಾಸಿಗಳನ್ನು ಬೇರೆಗೆಡೆಗೆ ಕಳಿಸಿ ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು.
"ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ನಾನು ಕಾರ್ಮಿಕರ ಕುಟುಂಬದ ಹಿನ್ನೆಲೆಯನ್ನು ಹೊಂದಿರುವವನು ಹಾಗೂ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದೇನೆ. 2019 ರಲ್ಲಿ ಹೋಟೆಲ್ ಒಂದಕ್ಕೆ ಜಾಗ ಮಾಡಿಕೊಡುವುದಕ್ಕಾಗಿ 521 ಗುಡಿಸಲುಗಳನ್ನು ನೆಲಸಮಗೊಳಿಸಲಾಗಿತ್ತು. ಈ ಪೈಕಿ ಹಲವರು ನಿರುದ್ಯೋಗಿಗಳಾದರು. ನಾವು ಹತ್ತಿರದ ಪ್ರದೇಶವೊಂದಕ್ಕೆ ಸ್ಥಳಾಂತರಗೊಂಡೆವು. ನಮಗೆ ನೀರು ಅಥವಾ ವಿದ್ಯುತ್ ಪೂರೈಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತ ಸ್ಥಳೀಯರು, ಆ ಪ್ರದೇಶದಲ್ಲಿ 10,000 ರೂಪಾಯಿಗಳನ್ನು 1 ರೂಪಾಯಿ ನಾಣ್ಯಗಳನ್ನು ಒಟ್ಟುಗೂಡಿಸುವ ಮೂಲಕ ಸಂಗ್ರಹಿಸಿದ್ದು, ಚುನಾವಣಾ ಠೇವಣಿ ಪಾವತಿಸಲು ನೀಡಿದ್ದಾರೆ.
"ನಮ್ಮ ಗುಡಿಸಲುಗಳನ್ನು ತೆರವುಗೊಳಿಸುವುದಕ್ಕೂ ಮುನ್ನ ನಮ್ಮ ಸ್ಲಮ್ ನಲ್ಲಿ ವಿದ್ಯುತ್ ಪೂರೈಕೆ ಇತ್ತು. ಬೇರೆಡೆಗೆ ಹೋಗಲು ಒತ್ತಡ ಬಂದು ಸ್ಥಳಾಂತರಗೊಂಡಾಗಿನಿಂದಲೂ ನೀರು ಹಾಗೂ ವಿದ್ಯುತ್ ಪೂರೈಕೆ ಇಲ್ಲ. ಯಾವುದೇ ರಾಜಕಾರಣಿಯೂ ನಮ್ಮ ನೆರವಿಗೆ ಬರುತ್ತಿಲ್ಲ.
ಈಗ ತಾವು ಕಂಡುಕೊಂಡಿರುವ ನೆಲೆಯ ಪ್ರದೇಶದಿಂದಲೂ ಬೇರೆಡೆಗೆ ಹೋಗುವಂತೆ ಸ್ಥಳೀಯ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಚುನಾವಣೆ ಹತ್ತಿರವಿದ್ದಾಗ ಕೆಲವು ರಾಜಕಾರಣಿಗಳು ಬಂದು ನೆರವು ನೀಡುವ ಭರವಸೆ ನೀಡುತ್ತಿದ್ದಾರೆ ಇದು 1990 ರಿಂದಲೂ ನಡೆಯುತ್ತಿದೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಖುದ್ದು ಸಿದ್ಧವಾದೆ ಎನ್ನುತ್ತಾರೆ ಮಹೇಂದ್ರ ಪಾಟ್ನಿ ಹೇಳಿದ್ದಾರೆ.