ಸೋಮವಾರ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ
ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಪ್ರಚಾರ ನಡೆಸಲಿದ್ದಾರೆ. ರಾಜ್ ಕೋಟ್ ಮತ್ತು ಸೂರತ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷ ಶನಿವಾರ ತಿಳಿಸಿದೆ.
Published: 19th November 2022 10:24 PM | Last Updated: 19th November 2022 10:24 PM | A+A A-

ರಾಹುಲ್ ಗಾಂಧಿ
ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಪ್ರಚಾರ ನಡೆಸಲಿದ್ದಾರೆ. ರಾಜ್ ಕೋಟ್ ಮತ್ತು ಸೂರತ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷ ಶನಿವಾರ ತಿಳಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ, ಈವರೆಗೂ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ನಲ್ಲಿ ಪ್ರಚಾರ ನಡೆಸಿಲ್ಲ. ಹಿಮಾಚಲ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದೆ. ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಸೋಮವಾರ ಭಾರತ್ ಜೋಡೋ ಯಾತ್ರೆಗೆ ಒಂದು ದಿನ ವಿರಾಮ ನೀಡಲಿರುವ ರಾಹುಲ್ ಗಾಂಧಿ ರಾಜ್ ಕೋಟ್ ಹಾಗೂ ಸೂರತ್ ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಯಾತ್ರೆ ಪ್ರಸ್ತುತ ಮಹಾರಾಷ್ಟ್ರದಲ್ಲಿದ್ದು, ಸದ್ಯದಲ್ಲೇ ಮಧ್ಯಪ್ರದೇಶ ಪ್ರವೇಶಿಸಲಿದೆ.
ಗುಜರಾತ್‌ನಲ್ಲಿ ಕಳೆದ 27 ವರ್ಷಗಳಿಂದ ಸತತವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಹವಣಿಸುತ್ತಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 77 ಮತ್ತು ಬಿಜೆಪಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರವೇಶದಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಸ್ಪರ್ಧೆ ಸಮೀಕರಣ ಬದಲಾಗುವ ಸಾಧ್ಯತೆಯಿದೆ.