ಗುಜರಾತ್ ಚುನಾವಣೆ: ಪ್ರತಿ ಮತಗಟ್ಟೆಯಲ್ಲೂ ಬಿಜೆಪಿಗೆ ಗೆಲುವು ನೀಡಿ; ಗಿರ್ ಸೋಮನಾಥದ ಜನರಿಗೆ ಪ್ರಧಾನಿ ಮನವಿ

ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗೆಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತೆಗೆ ಮನವಿ ಮಾಡಿದ್ದಾರೆ.
ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ರ‍್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ರ‍್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ವೆರಾವಲ್: ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗೆಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತೆಗೆ ಮನವಿ ಮಾಡಿದ್ದಾರೆ.

ಇಲ್ಲಿಗೆ ಸಮೀಪದ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ವೆರಾವಲ್ ಪಟ್ಟಣದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾನದ ದಿನದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಮತ್ತು ರಾಜ್ಯ ಚುನಾವಣೆಯಲ್ಲಿ ಮತದಾನದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತೆ ಒತ್ತಾಯಿಸಿದರು.

182 ಸದಸ್ಯರ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.

'ಪದೇ ಪದೆ ಬರಗಾಲದಂತಹ ವಿವಿಧ ಕಾರಣಗಳಿಗಾಗಿ ಈ ಹಿಂದೆ ಅನೇಕ ಜನರು ರಾಜ್ಯವನ್ನು ಕೀಳಾಗಿ ಕಾಣುತ್ತಿದ್ದರೂ, ಗುಜರಾತ್ ಈಗ ಪ್ರಗತಿ ಸಾಧಿಸಿದೆ. ಇಂದು ಇಡೀ ಉತ್ತರ ಭಾರತದ ಸರಕು ನಮ್ಮ ಬಂದರುಗಳಿಂದ ಜಗತ್ತನ್ನು ತಲುಪುತ್ತದೆ. ಈ ಬಂದರುಗಳು ಭಾರತದ ಅಭ್ಯುದಯದ ಬಾಗಿಲುಗಳಾಗಿವೆ' ಎಂದರು.

ಗುಜರಾತ್‌ನ ಬಿಜೆಪಿ ಸರ್ಕಾರವು ಸಾಗರಖೇಡು ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮೀನುಗಾರರಿಗೆ ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.
2017ರ ವಿಧಾನಸಭೆ ಚುನಾವಣೆಯಲ್ಲಿ, ತಲಾಲಾ, ಉನಾ, ಕೊಡಿನಾರ್ ಮತ್ತು ಸೋಮನಾಥ್ ಎಂಬ ಗಿರ್ ಸೋಮನಾಥ ಜಿಲ್ಲೆಯ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು.
ಭಾನುವಾರ ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ನಾಲ್ವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸುತ್ತಿದ್ದರು.

ಈ ಚುನಾವಣೆಯಲ್ಲಿ ಮತದಾನದ ದಿನದಂದು ಜನರು ತಮ್ಮ ತಮ್ಮ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಮತ್ತು ಮತದಾನದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಬೇಕೆಂದು ನಾನು ಬಯಸುತ್ತೇನೆ. ಬಿಜೆಪಿಗೆ ಮಾತ್ರ ಮತ ಹಾಕಿ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಬ್ಬ ಪ್ರಜೆಯೂ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ. ಇದು ಪ್ರತಿಯೊಬ್ಬರಿಗೂ ನಾನು ಮಾಡುವ ಮನವಿಯಾಗಿದೆ ಎಂದು ಮೋದಿ ಅವರು ರ‍್ಯಾಲಿಯಲ್ಲಿದ್ದ ಬಿಜೆಪಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ನಾನು ನಿಮ್ಮಿಂದ ಬಯಸುವ ಇನ್ನೊಂದು ವಿಚಾರವೆಂದರೆ ಇಲ್ಲಿನ ಪ್ರತಿಯೊಂದು ಮತಗಟ್ಟೆಯಲ್ಲಿಯೂ ಬಿಜೆಪಿ ಗೆಲ್ಲಬೇಕು. ನೀವು ನನಗಾಗಿ ಮತವನ್ನು ಚಲಾಯಿಸುವಿರಾ? ಈ ಬಾರಿ ಇಲ್ಲಿನ ಎಲ್ಲಾ ಮತಗಟ್ಟೆಗಳನ್ನು ಗೆಲ್ಲುವತ್ತ ನನ್ನ ಗಮನವಿದೆ. ಇದನ್ನು ಸಾಧಿಸಲು ನೀವು ನನಗೆ ಸಹಾಯ ಮಾಡಿದರೆ, ಈ ನಾಲ್ಕು ಬಿಜೆಪಿ ಅಭ್ಯರ್ಥಿಗಳು ಗಾಂಧಿನಗರದ ವಿಧಾನಸಭೆಗೆ ಸ್ವಯಂಚಾಲಿತವಾಗಿ ತಲುಪುತ್ತಾರೆ ಎಂದು ಪ್ರಧಾನಿ ಹೇಳಿದರು.

ಗುಜರಾತ್‌ನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಮತ್ತು ವಿವಿಧ ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿದ್ದರೂ, ಸದ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗರಿಷ್ಠ ಸ್ಥಾನಗಳನ್ನು ಗೆದ್ದ ಹಿಂದಿನ ದಾಖಲೆಗಳನ್ನು ಮುರಿಯುವುದನ್ನು ನೋಡಲು ನಾನು ಆಗಾಗ್ಗೆ ಇಲ್ಲಿಗೆ ಬರುತ್ತೇನೆ ಎಂದು ಮೋದಿ ಹೇಳಿದರು.

ನಿಮ್ಮ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ಭೂಪೇಂದ್ರ ಅವರು ನನ್ನ ದಾಖಲೆಗಳನ್ನು ಮುರಿಯುತ್ತಾರೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ಗುಜರಾತ್ ಅನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ನಿಮ್ಮ ಆಶೀರ್ವಾದವನ್ನು ನಮಗೆ ನೀಡುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com