ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡಿನಲ್ಲಿ 85 ವರ್ಷದ ರೈತ ಬೆಂಕಿ ಹಚ್ಚಿಕೊಂಡು ಸಾವು!

ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ 85 ವರ್ಷದ ರೈತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ 85 ವರ್ಷದ ರೈತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಲೈಯಾರ್‌ನಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಕಚೇರಿ ಎದುರು ಬೆಳಗ್ಗೆ 11 ಗಂಟೆ ಸುಮಾರಿಗೆ ರೈತ ತಂಗವೇಲ್ ಬೆಂಕಿ ಹಚ್ಚಿಕೊಂಡಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂಗವೇಲ್ ಅವರು ಡಿಎಂಕೆ ಪಕ್ಷದಲ್ಲಿ ಸಕ್ರಿಯ ಸದಸ್ಯರಾಗಿದ್ದು ಪಕ್ಷದ ಕೃಷಿ ಒಕ್ಕೂಟದ ಸಂಘಟಕರಾಗಿದ್ದರು.

ಹಿಂದಿ ಹೇರಿಕೆಯ ವಿಷಯವೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಅಧಿಕೃತ ಭಾಷಾ ಸಮಿತಿಯ ವರದಿಯ ನಂತರ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ವಿರೋಧಿ ಹೋರಾಟ ಕಾವು ಮತ್ತೊಮ್ಮೆ ಏರಿಕೆಯಾಗಿದೆ. ಈ ವರದಿಯಲ್ಲಿ, ಹಿಂದಿ ಮಾತನಾಡುವ ರಾಜ್ಯಗಳಲ್ಲಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನಾಗಿ ಮಾಡಲು ಶಿಫಾರಸು ಮಾಡಲಾಗಿದೆ. ಇದಲ್ಲದೇ ಕೇಂದ್ರೀಯ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬಳಸಲು ಶಿಫಾರಸು ಮಾಡಲಾಗಿದೆ. ಸಮಿತಿಯ ಶಿಫಾರಸಿಗೆ ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಸಮಿತಿಯ ಶಿಫಾರಸು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯಾಗಿದೆ. ಕೇಂದ್ರ ಸರ್ಕಾರವು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಎಲ್ಲಾ ಭಾಷೆಗಳಲ್ಲಿಯೂ ಸಿದ್ಧಪಡಿಸಬೇಕು ಎಂದು ಹೇಳಿದರು.

ತಮಿಳುನಾಡು ಸರ್ಕಾರ ಕೂಡ ವಿಧಾನಸಭೆಯಲ್ಲಿ ಹಿಂದಿ ಹೇರಿಕೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಈ ಪ್ರಸ್ತಾಪದ ಮೇಲಿನ ಚರ್ಚೆಯಲ್ಲಿ ಸಿಎಂ ಸ್ಟಾಲಿನ್, ಇಂಗ್ಲಿಷ್ ಅನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರವು ಪರೋಕ್ಷವಾಗಿ ಅದರ ಬದಲಿಗೆ ಹಿಂದಿಯನ್ನು ಪರಿಚಯಿಸುವ ಉದ್ದೇಶವಾಗಿದೆ ಎಂದು ಹೇಳಿದ್ದರು. ಹೆಚ್ಚು ಹಿಂದಿ, ಕಡಿಮೆ ಹಿಂದಿ ಮತ್ತು ಹಿಂದಿ ಮಾತನಾಡದ ಭಾಗಗಳನ್ನು ಒಳಗೊಂಡಂತೆ ದೇಶವನ್ನು ಮೂರು ವಿಭಿನ್ನ ಭಾಗಗಳಾಗಿ ವಿಭಜಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದರು.

ವಾಸ್ತವವಾಗಿ, ಈ 30-ಸದಸ್ಯ ಸಮಿತಿಯು ಪ್ರತಿ ಐದು ವರ್ಷಗಳಿಗೊಮ್ಮೆ ಅಧಿಕೃತ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಶಿಫಾರಸುಗಳನ್ನು ನೀಡುತ್ತದೆ. ಅವುಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಅಧ್ಯಕ್ಷರ ವಿವೇಚನೆಗೆ ಬಿಟ್ಟಿರುತ್ತದೆ. ಇಲ್ಲಿಯವರೆಗೆ ರಾಷ್ಟ್ರಪತಿಗಳು ಈ ಶಿಫಾರಸುಗಳನ್ನು ಅಂಗೀಕರಿಸಿಲ್ಲ ಮತ್ತು ಪ್ರತಿಭಟನೆಗಳ ದೃಷ್ಟಿಯಿಂದ ಹಾಗೆ ಮಾಡುವುದು ಕಷ್ಟಕರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com