
ಆತ್ಮಹತ್ಯೆ
ಭೋಪಾಲ್: ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಬಾರದ ಕಾರಣ 17 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನ್ಯೂ ಗೌರಿನಗರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಶೈಲ್ ಕುಮಾರಿ ತನ್ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಸಂತ್ರಸ್ತೆಯ ಸಹೋದರಿ ಹಾಗೂ ತಾಯಿ ನೀಡಿರುವ ಮಾಹಿತಿಯ ಪ್ರಕಾರ, ಮೃತ ಬಾಲಕಿ ಗಗನಸಖಿಯಾಗುವುದಕ್ಕಾಗಿ ತರಬೇತಿ ಪಡೆಯುವವಳಿದ್ದಳು ಆದರೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಆದ್ದರಿಂದ ಇಂಗ್ಲೀಷ್ ಮಾತನಾಡುವ ತರಬೇತಿಯನ್ನೂ ಪಡೆಯುತ್ತಿದ್ದಳು ಎಂದು ಹೀರಾನಗರ್ ಪೊಲೀಸ್ ಠಾಣೆಯ ಉಸ್ತುವಾರಿ ದಿಲೀಪ್ ಪುರಿ ಹೇಳಿದ್ದಾರೆ.
ಬಾಲಕಿಗೆ ತನ್ನ ಸ್ನೇಹಿತರಷ್ಟು ಚೆನ್ನಾಗಿ ಇಂಗ್ಲೀಷ್ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಆಕೆ ಖಿನ್ನತೆಗೂ ಜಾರಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.