ಅಫ್ತಾಬ್ ವ್ಯಾನ್ ಮೇಲೆ ದಾಳಿ ಮಾಡಿದ ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ದೆಹಲಿ ನ್ಯಾಯಾಲಯ
ಅಫ್ತಾಬ್ ಪೂನಾವಾಲಾ ಇದ್ದ ವ್ಯಾನ್ ಅನ್ನು ಸುತ್ತುವರಿದ ಗುಂಪಿನಲ್ಲಿದ್ದ ಇಬ್ಬರು ದಾಳಿಕೋರರನ್ನು ದೆಹಲಿ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Published: 29th November 2022 12:49 PM | Last Updated: 29th November 2022 12:49 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಅಫ್ತಾಬ್ ಪೂನಾವಾಲಾ ಇದ್ದ ವ್ಯಾನ್ ಅನ್ನು ಸುತ್ತುವರಿದ ಗುಂಪಿನಲ್ಲಿದ್ದ ಇಬ್ಬರು ದಾಳಿಕೋರರನ್ನು ದೆಹಲಿ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಯುಧ ಹಿಡಿದಿದ್ದ ಕುಲದೀಪ್ ಠಾಕೂರ್ ಮತ್ತು ನಿಗಮ್ ಗುರ್ಜರ್ ಅವರನ್ನು ಸೋಮವಾರ ಬಂಧಿಸಿ ಮಂಗಳವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ದೆಹಲಿ ಪೊಲೀಸರ ಪ್ರಕಾರ, ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಹೊರಗೆ ಪೂನಾವಾಲಾ ಅವರ ವ್ಯಾನ್ ಅನ್ನು ಕಾರೊಂದು ಓವರ್‌ಟೇಕ್ ಮಾಡುವ ಮೂಲಕ ನಿಲ್ಲಿಸಿತು. ಪೂನಾವಾಲಾನನ್ನು ಸುಳ್ಳು ಪತ್ತೆ ಪರೀಕ್ಷೆಗಾಗಿ ಅಲ್ಲಿಗೆ ಕರೆತರಲಾಗಿತ್ತು.
ಇದೀಗ ಎಫ್‌ಎಸ್‌ಎಲ್‌ನ ಹೊರಗೆ ಬಿಎಸ್‌ಎಫ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಪೂನಾವಾಲಾಗೆ ಹಾನಿ ಮಾಡುವ ಉದ್ದೇಶದಿಂದ ಕಾರಿನಿಂದ ಹೊರಬಂದ ಕೆಲವರು ವ್ಯಾನ್ ಮೇಲೆ ದಾಳಿ ನಡೆಸಿದ್ದಾರೆ. ಗುರುಗ್ರಾಮದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳು ಕತ್ತಿಗಳನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ. ಇತರೆ ದಾಳಿಕೋರರಿಗಾಗಿ ತಂಡ ಶೋಧ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರ ಗುಂಪು ಕಾರಿನಲ್ಲಿ ಬಂದಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ನಾಲ್ಕೈದು ಜನ ಇದ್ದರು. ವಿಚಾರಣೆ ವೇಳೆ ಇತರರು ಶಾಮೀಲಾಗಿರುವುದು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಆಫ್ತಾಬ್ ಪೂನಾವಾಲಾ ಹತ್ಯೆಗೆ ಯತ್ನ! ವಿಡಿಯೋ
ಈ ಸಂಬಂಧ ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186, 353, 147, 148 ಮತ್ತು 149ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇದಲ್ಲದೆ, ಎಫ್‌ಎಸ್‌ಎಲ್ ಅಧಿಕಾರಿಗಳು ಸೋಮವಾರ ಸುಮಾರು ಏಳು ಗಂಟೆಗಳ ಕಾಲ ಪೂನಾವಾಲಾ ಅವರ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಿದರು.
ಸುಳ್ಳು ಪತ್ತೆ ಪರೀಕ್ಷೆಯು ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ ಎಂದು ಎಫ್‌ಎಸ್‌ಎಲ್‌ನ ಉಪನಿರ್ದೇಶಕ ಸಂಜೀವ್ ಗುಪ್ತಾ ಹೇಳಿದ್ದಾರೆ.
ನವೆಂಬರ್ 26 ರಂದು ನ್ಯಾಯಾಲಯವು ಪೂನಾವಾಲಾ ಅವರನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ತನ್ನ ಲಿವ್ ಇನ್ ರಿಲೇಷನ್‌ಶಿಪ್‍ನಲ್ಲಿದ್ದ ಶ್ರದ್ಧಾಳ ಕತ್ತು ಹಿಸುಕಿ ಕೊಂದ ನಂತರ ದೇಹವನ್ನು 36 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಪೂನಾವಾಲನನ್ನು ನವೆಂಬರ್ 12 ರಂದು ಬಂಧಿಸಲಾಯಿತು. ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಈ ಘಟನೆ ನಡೆದಿದೆ.