ಮುಂಬೈನಲ್ಲಿ ದಡಾರ ಏಕಾಏಕಿ ಉಲ್ಬಣ: 11 ಹೊಸ ಪ್ರಕರಣಗಳು; ಒಬ್ಬ ಶಂಕಿತ ಸಾವು
ಮುಂಬೈ ನಗರದಲ್ಲಿ 11 ಹೊಸ ದಡಾರ ಪ್ರಕರಣಗಳು ವರದಿಯಾಗಿದ್ದು, ವೈರಲ್ ಸೋಂಕು ಹರಡುತ್ತಿರುವ ಆತಂಕದ ಮಧ್ಯೆಯೇ ಒಂದು ಶಂಕಿತ ಸಾವು ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 29th November 2022 04:48 PM | Last Updated: 29th November 2022 07:20 PM | A+A A-

ಪ್ರಾತಿನಿಧಿಕ ಚಿತ್ರ
ಮುಂಬೈ: ನಗರದಲ್ಲಿ 11 ಹೊಸ ದಡಾರ ಪ್ರಕರಣಗಳು ವರದಿಯಾಗಿದ್ದು, ವೈರಲ್ ಸೋಂಕು ಹರಡುತ್ತಿರುವ ಆತಂಕದ ಮಧ್ಯೆಯೇ ಒಂದು ಶಂಕಿತ ಸಾವು ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ವರದಿಯಾದ ಪ್ರಕರಣಗಳೊಂದಿಗೆ, ಈ ವರ್ಷ ಮಹಾನಗರದಲ್ಲಿ ಸೋಂಕಿತರ ಸಂಖ್ಯೆ 303 ಕ್ಕೆ ಏರಿದೆ.
ಈವರೆಗೆ ಎಂಟು ಮಂದಿ ದಡಾರದಿಂದ ಮೃತಪಟ್ಟಿರುವ ಬಗ್ಗೆ ದೃಢಪಟ್ಟಿದ್ದು, ಶಂಕಿತ ಸಾವುಗಳು ಮೂರು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.
ಮುಂಬೈನಲ್ಲಿ 9 ತಿಂಗಳಿನಿಂದ ಐದು ವರ್ಷದೊಳಗಿನ 1,34,833 ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಡಿಸೆಂಬರ್ 1 ರಿಂದ 33 ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ಡೋಸ್ (ವಿಶೇಷ ಡೋಸ್) ವಿತರಿಸಲಾಗುತ್ತದೆ ಎಂದು ನಾಗರಿಕ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಒಂಬತ್ತು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ದಡಾರ ಪ್ರಕರಣಗಳು ವರದಿಯಾಗಿರುವ 13 ಆರೋಗ್ಯ ಕೇಂದ್ರಗಳಲ್ಲಿ ಆರರಿಂದ ಒಂಬತ್ತು ತಿಂಗಳ ವಯಸ್ಸಿನ ಒಟ್ಟು 3,496 ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಬಿಎಂಸಿಯು ಈವರೆಗೆ 53,66,144 ಮನೆಗಳನ್ನು ಸಮೀಕ್ಷೆ ನಡೆಸಿದ್ದು, 4,062 ಜ್ವರ ಮತ್ತು ದದ್ದು ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿಕೆ ತಿಳಿಸಿದೆ.
ಸೋಮವಾರ ನಗರದ ಪಶ್ಚಿಮ ಭಾಗದಲ್ಲಿರುವ ಅಂಧೇರಿಯಲ್ಲಿ ವಾಸಿಸುತ್ತಿದ್ದ ಒಂದು ವರ್ಷದ ಬಾಲಕಿಯು ಸಾವಿಗೀಡಾಗಿದ್ದಳು. ಇದು ಜನ್ಮಜಾತ ಹೃದ್ರೋಗದ (ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ ಮತ್ತು ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್) ಪ್ರಕರಣವಾಗಿದ್ದು, ಎರಡು ವಾರಗಳ ಹಿಂದಷ್ಟೇ ರೋಗಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ದದ್ದು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಕೆಯನ್ನು ಶನಿವಾರ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು.
ಬಳಿಕ ಆಕೆಯ ಸ್ಥಿತಿಯು ಹದಗೆಟ್ಟಿತು ಮತ್ತು ಮಧ್ಯಾಹ್ನ 1.30ಕ್ಕೆ ಆಕೆ ಕೊನೆಯುಸಿರೆಳೆದ್ದಾಳೆ. ಆಕೆಯ ಸಾವಿಗೆ ತೀವ್ರವಾದ ಉಸಿರಾಟದ ವೈಫಲ್ಯ, ದಡಾರ ಮತ್ತು ಬ್ರಾಂಕೋಪ್ನ್ಯೂಮೋನಿಯಾದಿಂದ ಸಂಭವಿಸಿದೆ ಎಂದು ನಾಗರಿಕ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.