ಗುಜರಾತ್ ಚುನಾವಣೆ: ಎಎಪಿ ಉಚಿತ ವಿದ್ಯುತ್ ಭರವಸೆ; 25 ಸಾವಿರ ಬಿಲ್ ತಂದು ಸಾಕ್ಷಿ ತೋರಿಸಿದ ಪಂಜಾಬ್ ಸಿಎಂ

ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಈ ಮಧ್ಯೆ  ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬುಧವಾರ ತಮ್ಮ ರಾಜ್ಯದಿಂದ 25,000 "ಶೂನ್ಯ" ವಿದ್ಯುತ್...
ಭಗವಂತ್ ಮಾನ್
ಭಗವಂತ್ ಮಾನ್

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಈ ಮಧ್ಯೆ  ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬುಧವಾರ ತಮ್ಮ ರಾಜ್ಯದಿಂದ 25,000 "ಶೂನ್ಯ" ವಿದ್ಯುತ್ ಬಿಲ್‌ಗಳನ್ನು ತಂದು ತೋರಿಸಿದ್ದು, ಗುಜರಾತ್ ನಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸಿದರೆ ನೀವೂ ಇದೇ ರೀತಿಯ ಬಿಲ್‌ಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಗುಜರಾತ್‌ ಚುನಾವಣೆಗೆ ಎಎಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ.

182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾನ್, ಪಂಜಾಬ್‌ನ 75 ಲಕ್ಷ ಮನೆಗಳಲ್ಲಿ 61 ಲಕ್ಷ ಮನೆಗಳು ಶೂನ್ಯ ವಿದ್ಯುತ್ ಬಿಲ್‌ಗಳನ್ನು ಸ್ವೀಕರಿಸಿವೆ, ಇದು ಎಎಪಿಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

"ನಾನು 25,000 ಶೂನ್ಯ ವಿದ್ಯುತ್ ಬಿಲ್‌ಗಳನ್ನು ತಂದಿದ್ದು, ನೀವು ಹೆಸರುಗಳು ಮತ್ತು ವಿಳಾಸಗಳನ್ನು ಪರಿಶೀಲಿಸಬಹುದಾಗಿದೆ. ಪಂಜಾಬ್‌ನಲ್ಲಿ ಸುಮಾರು 75 ಲಕ್ಷ ಎಲೆಕ್ಟ್ರಿಕ್ ಮೀಟರ್‌ಗಳಿವೆ. 61 ಲಕ್ಷ ಮನೆಗಳು ಶೂನ್ಯ ವಿದ್ಯುತ್ ಬಿಲ್‌ಗಳನ್ನು ಪಡೆದಿವೆ" ಎಂದು ತಿಳಿಸಿದರು.

"ಚಳಿಗಾಲದಲ್ಲಿ ಕಡಿಮೆ ಬಳಕೆಯಿಂದಾಗಿ ಡಿಸೆಂಬರ್‌ನಲ್ಲಿ ಅಂತಹ ಬಿಲ್‌ಗಳ ಸಂಖ್ಯೆ 67 ಲಕ್ಷ ಆಗಿರುತ್ತದೆ. ಅದೇ ಜನವರಿಯಲ್ಲಿ 71 ಲಕ್ಷಕ್ಕೆ ಹೆಚ್ಚಾಗುತ್ತದೆ. ನಾವು ಏನು ಹೇಳುತ್ತೇವೆ ಅದನ್ನು ಮಾಡುತ್ತೇವೆ. ಗುಜರಾತ್‌ನಲ್ಲೂ ಅದೇ ರೀತಿ ಮಾಡುತ್ತೇವೆ. ನಾವು ನೀಡಿದ ಭರವಸೆ ಈಡೇರಿಸುತ್ತೇವೆ’’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com