ಲೈಗರ್ ಸಿನಿಮಾಗೆ ಹಣದ ಹರಿವು: ಇ.ಡಿ ಮುಂದೆ ಹಾಜರಾದ ನಟ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಅವರು ತಮ್ಮ ಇತ್ತೀಚಿನ ಚಿತ್ರ 'ಲೈಗರ್' ಸಿನಿಮಾದ ಭಾರಿ ಬಂಡವಾಳ ಹೂಡಿಕೆಯ ವಿರುದ್ಧ ಶಂಕಿತ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ) ಉಲ್ಲಂಘನೆಗೆ ಸಂಬಂಧಿಸಿದ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಬುಧವಾರ ಹಾಜರಾಗಿದ್ದಾರೆ.
Published: 30th November 2022 04:16 PM | Last Updated: 30th November 2022 04:16 PM | A+A A-

ವಿಜಯ್ ದೇವರಕೊಂಡ
ಹೈದರಾಬಾದ್: ಜನಪ್ರಿಯ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಇತ್ತೀಚಿನ ಚಿತ್ರ 'ಲೈಗರ್' ಸಿನಿಮಾದ ಭಾರಿ ಬಂಡವಾಳ ಹೂಡಿಕೆಯ ವಿರುದ್ಧ ಶಂಕಿತ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ) ಉಲ್ಲಂಘನೆಗೆ ಸಂಬಂಧಿಸಿದ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಬುಧವಾರ ಹಾಜರಾಗಿದ್ದಾರೆ.
ಹೈದರಾಬಾದ್‌ನಲ್ಲಿರುವ ತನಿಖಾ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ನಟ ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಅವರನ್ನು ಚಲನಚಿತ್ರಕ್ಕೆ ಹೂಡಿಕೆ ಮಾಡಲಾದ ಹಣದ ಮೂಲಗಳು, ಅವರು ಪಡೆದ ಸಂಭಾವನೆ ಮತ್ತು ಅಮೆರಿಕದ ಪ್ರಸಿದ್ಧ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರ ನಟರಿಗೆ ಪಾವತಿಸಿದ ಸಂಭಾವನೆ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎನ್ನಲಾಗಿದೆ.
ಇ.ಡಿ ಅಧಿಕಾರಿಗಳು ನವೆಂಬರ್ 17 ರಂದು ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆ ನಡೆಸಿದ್ದರು.
ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ 'ಲೈಗರ್' ಸಿನಿಮಾಗೆ ಹೂಡಿಕೆಯ ಮೂಲದ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು. ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಸುಮಾರು 125 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.
ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಟಿಸಿರುವ ಈ ಚಿತ್ರವು ಲಾಸ್ ವೇಗಾಸ್‌ನಲ್ಲಿ ಮೆಗಾ ಶೂಟ್‌ಗಳನ್ನು ಹೊಂದಿತ್ತು. ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಸಲಾಗಿತ್ತು. ಆದಾಗ್ಯೂ, ಇದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣುವಲ್ಲಿ ವಿಫಲವಾಯಿತು.
ಸಂಶಯಾಸ್ಪದ ಮಾರ್ಗಗಳ ಮೂಲಕ ಚಲನಚಿತ್ರಕ್ಕೆ ಹೂಡಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ಅವರು ದೂರು ದಾಖಲಿಸಿದ ನಂತರ ಇ.ಡಿ ತನಿಖೆಯನ್ನು ಕೈಗೆತ್ತಿಕೊಂಡಿತು.
ರಾಜಕಾರಣಿಗಳೂ ಕೂಡ ಲೈಗರ್ ಸಿನಿಮಾದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆದಾರರು ತಮ್ಮ ಬಳಿಯಲ್ಲಿರುವ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ಸುಲಭ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಬಕ್ಕಾ ಜಡ್ಸನ್ ದೂರಿದ್ದರು.
ಎಫ್ಇಎಂಎ ಅನ್ನು ಉಲ್ಲಂಘಿಸಿ ವಿದೇಶಗಳಿಂದ ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಇ.ಡಿ ಅಧಿಕಾರಿಗಳು ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಇಬ್ಬರು ನಿರ್ಮಾಪಕರ ಖಾತೆಗಳಿಗೆ ಹಲವಾರು ಕಂಪನಿಗಳು ಹಣವನ್ನು ವರ್ಗಾಯಿಸಿವೆ ಎಂದು ಇಡಿ ಶಂಕಿಸಿದ್ದು, ಯಾರೆಲ್ಲ ಮತ್ತು ಯಾವ ಉದ್ದೇಶಕ್ಕಾಗಿ ಹಣವನ್ನು ರವಾನಿಸಿದ್ದಾರೆ ಎಂಬ ಬಗ್ಗೆ ಅದಿಕಾರಿಗಳು ಅವರಿಂದ ವಿವರಣೆ ಕೇಳಿದ್ದಾರೆ. ಮೈಕ್ ಟೈಸನ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿದೇಶಿ ನಟರಿಗೆ ಹಣದ ಪಾವತಿಗಳನ್ನು ಹೇಗೆ ಮಾಡಲಾಗಿದೆ ಎಂಬುದರ ವಿವರಗಳನ್ನು ಒದಗಿಸುವಂತೆಯೂ ಕೇಳಲಾಗಿದೆ.