ತಂತ್ರಜ್ಞಾನ ನಿಜವಾದ ಅರ್ಥದಲ್ಲಿ ಇಂದು ಪ್ರಜಾಪ್ರಭುತ್ವವಾಗಿದೆ: 5ಜಿ ತರಂಗಾಂತರ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ 5ಜಿ ತಂತ್ರಜ್ಞಾನ ಆರಂಭ ಹೊಸ ಯುಗದ ಉಗಮವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಅವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ದೇಶದಲ್ಲಿ 5ಜಿ ತಂತ್ರಜ್ಞಾನ ಆರಂಭ ಹೊಸ ಯುಗದ ಉಗಮವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಅವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಶಕೆ ಆರಂಭದ 5ಜಿ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರವು 2ಜಿ, 3ಜಿ ಮತ್ತು 4ಜಿ ಟೆಲಿಕಾಂ ಸೇವೆಗಳಿಗಾಗಿ ತಂತ್ರಜ್ಞಾನಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದರೆ, ಭಾರತವು 5ಜಿ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ ಎಂದು ಹೇಳಿದರು.

ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಕ್ರಾಂತಿಯೇನು?: ಇದೇ ಸಂದರ್ಭದಲ್ಲಿ ಡಿಜಿಟಲ್ ಇಂಡಿಯಾಗೆ ಸರ್ಕಾರದ ದೃಷ್ಟಿಕೋನವನ್ನು ಪ್ರಧಾನಿ ಮೋದಿ ವಿವರಿಸಿದರು. 'ಡಿಜಿಟಲ್ ಇಂಡಿಯಾ' ಸಾಧನಗಳ ಬೆಲೆ, ಡಿಜಿಟಲ್ ಸಂಪರ್ಕ, ಡೇಟಾ ವೆಚ್ಚ ಮತ್ತು ಡಿಜಿಟಲ್-ಮೊದಲ ವಿಧಾನ ಎಂಬ ನಾಲ್ಕು ಸ್ತಂಭಗಳ ಮೇಲೆ ಸ್ಥಾಪಿಸಲಾಗಿದೆ. ಭಾರತದಲ್ಲಿ ಮೊಬೈಲ್ ತಯಾರಿಕಾ ಘಟಕಗಳು 2014 ರಲ್ಲಿ ಕೇವಲ ಎರಡರಿಂದ ಈಗ 200ಕ್ಕಿಂತ ಹೆಚ್ಚಾಗಲು ಕಾರಣವಾಗಿದ್ದು, ಮೊಬೈಲ್ ಹ್ಯಾಂಡ್‌ಸೆಟ್‌ಗಳ ಬೆಲೆ ಕಡಿಮೆಯಾಗಿದೆ. 

ಭಾರತವು ಈಗ ವಿಶ್ವದ ಅತ್ಯಂತ ಕಡಿಮೆ ಡೇಟಾ ಶುಲ್ಕವನ್ನು ಹೊಂದಿದೆ ಎಂದು ಹೇಳಿದ ಅವರು, 2014 ರಲ್ಲಿ ಪ್ರತಿ 1 ಜಿಬಿ ಡೇಟಾಗೆ 300 ರೂಪಾಯಿಗಳಿದ್ದರೆ ಈಗ ದರ ಪ್ರತಿ ಜಿಬಿಗೆ 10 ರೂಪಾಯಿಗೆ ಇಳಿಕೆಯಾಗಿದೆ. ತಿಂಗಳಿಗೆ ಸರಾಸರಿ 14 ಜಿಬಿ ಡೇಟಾವನ್ನು ಬಳಸಿದರೆ, ಡೇಟಾ ವೆಚ್ಚವು ರೂ 4,200 ರಿಂದ ರೂ 125-150 ಕ್ಕೆ ಈಗ ಇಳಿದಿದೆ ಎಂದು ಅವರು ಹೇಳಿದರು.

ಶೂನ್ಯ ರಫ್ತಿನಿಂದ ದೇಶವು ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಫೋನ್‌ಗಳನ್ನು ರವಾನಿಸುತ್ತಿದೆ. ಅಲ್ಲದೆ, ಡಿಜಿಟಲ್ ಪಾವತಿಯೂ ಹೆಚ್ಚಿದೆ. ತಂತ್ರಜ್ಞಾನವು ನಿಜವಾಗಿಯೂ ಈಗ ಪ್ರಜಾಪ್ರಭುತ್ವೀಕರಣಗೊಂಡಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. 

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ತಮ್ಮ ಸರ್ಕಾರದ ಉದ್ದೇಶದಿಂದ ಇದು ಸಾಧ್ಯವಾಯಿತು. ಇದು 2G ಯುಗ ಮತ್ತು 5G ಯುಗದ ಉದ್ದೇಶಗಳ ನಡುವಿನ ವ್ಯತ್ಯಾಸವಾಗಿದೆ ಎಂದು ಅವರು 2G ತರಂಗಾಂತರ ಹಂಚಿಕೆ ಹಗರಣವನ್ನು ಉಲ್ಲೇಖಿಸಿ ಹಿಂದಿನ ಯುಪಿಎ ಸರ್ಕಾರವನ್ನು ಕುಟುಕಿದರು.

5ಜಿ ಸೇವೆಯಿಂದ ಏನು ಉಪಯೋಗ?: ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ, ಐದನೇ ತಲೆಮಾರಿನ ಅಥವಾ 5G ಸೇವೆಯು ಹೊಸ ಆರ್ಥಿಕ ಅವಕಾಶಗಳನ್ನು ಮತ್ತು ಸಾಮಾಜಿಕ ಪ್ರಯೋಜನಗಳನ್ನು ಬಿಡುಗಡೆ ಮಾಡುತ್ತದೆ, ಇದು ಭಾರತೀಯ ಸಮಾಜಕ್ಕೆ ಪರಿವರ್ತನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. 

ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ 5G ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ, ಅವರ ನಡುವಿನ ಭೌತಿಕ ಅಂತರವನ್ನು ಮರೆತುಬಿಡುತ್ತದೆ ಎಂಬುದನ್ನು ತೋರಿಸಲಾಯಿತು. 

ಡೆಮೊ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಮೋದಿ, ಅವರ ನೆಚ್ಚಿನ ವಿಷಯ ಮತ್ತು ತಂತ್ರಜ್ಞಾನದ ಬಳಕೆಯು ಕಲಿಕೆಯಲ್ಲಿ ಹೇಗೆ ಸಹಾಯ ಮಾಡಿದೆ ಎಂದು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com