ಅಹಮದಾಬಾದ್: ಗುಜರಾತ್‌ನಲ್ಲಿ ಇಂದು ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚನೆ ಮಾಡಲಿದೆ ಎಂದು ಗುಪ್ತಚರ ಇಲಾಖೆ ವರದಿ ಸೂಚಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಳಿಸಿದ್ದು, ಕಾಂಗ್ರೆಸ್ ತಕ್ಷಣವೇ ಅವರ ಹೇಳಿಕೆಯನ್ನು ತಿರಸ್ಕರಿಸಿದೆ.
ರಾಜ್‌ಕೋಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, 'ಮೂಲಗಳ ಪ್ರಕಾರ, ಇತ್ತೀಚಿನ ಗುಪ್ತಚರ ಇಲಾಖೆ ವರದಿಯೊಂದು ಗುಜರಾತ್‌ನಲ್ಲಿ ಇಂದು ಚುನಾವಣೆ ನಡೆದರೆ, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗುತ್ತದೆ. ಈ ಸರ್ಕಾರ ಕಡಿಮೆ ಅಂತರದಲ್ಲಿ ರಚನೆಯಾಗುತ್ತಿದೆ ಮತ್ತು ನಾವು ಕೆಲವೇ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವರದಿ ಹೇಳುತ್ತದೆ' ಎಂದರು.
ಹೀಗಾಗಿ, ಚುನಾವಣೆಯಲ್ಲಿ ಹೆಚ್ಚಿನ ಬಹುಮತವನ್ನು ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಎಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ ಅವರು, ವರದಿಯು ಸರ್ಕಾರಕ್ಕೆ ಲಭ್ಯವಾದಾಗಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿ ಗುಂಪು ಸಭೆಗಳನ್ನು ನಡೆಸುತ್ತಿವೆ. ವರದಿಯಿಂದ ಬಿಜೆಪಿ ಭಯಗೊಂಡಿದ್ದು, ಎರಡೂ ಪಕ್ಷಗಳ ನಾಯಕರು ಎಎಪಿ ವಿರುದ್ಧ ಅದೇ ಭಾಷೆಯಲ್ಲಿ ಆರೋಪ ಮಾಡುತ್ತಿದ್ದಾರೆ' ಎಂದು ಹೇಳಿದರು.
ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, 'ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಹೇಳಿಕೆಯ ನಂತರ, ಉದ್ಭವಿಸುವ ಮೊದಲ ಪ್ರಶ್ನೆಯೆಂದರೆ ಇಂಟಲಿಜೆನ್ಸ್ ಬ್ಯೂರೋ ವರದಿಯು ಕೇಜ್ರಿವಾಲ್‌ಗೆ ಹೇಗೆ ಲಭ್ಯವಾಯಿತು? ಮತ್ತು ಈ ವರದಿ ಅವರ ಬಳಿಯಿದ್ದರೆ, ಅವರು ಈ ಗೌಪ್ಯ ವರದಿಯನ್ನು ಏಕೆ ಸಾರ್ವಜನಿಕಗೊಳಿಸಿದರು? ಐಬಿ ವರದಿಯನ್ನು ಸಾರ್ವಜನಿಕಗೊಳಿಸುವುದು ಗೌಪ್ಯತೆಯ ಪ್ರಮಾಣ ವಚನದ ಉಲ್ಲಂಘನೆಯಲ್ಲವೇ? ಕೇಜ್ರಿವಾಲ್ ಮಾಜಿ ಸರ್ಕಾರಿ ಅಧಿಕಾರಿ, ಇದನ್ನು ಅವರು ತಿಳಿದುಕೊಳ್ಳಬೇಕು' ಎಂದಿದ್ದಾರೆ.
ಕೇಜ್ರಿವಾಲ್ ಅವರ ಹೇಳಿಕೆಗಳ ಬಗ್ಗೆ ತನಿಖೆಗೆ ಒತ್ತಾಯಿಸಿದ ದೋಷಿ, 'ಈ ವಿಷಯವನ್ನು ತನಿಖೆ ಮಾಡಬೇಕು ಮತ್ತು ಅವರು ಬಹಿರಂಗವಾಗಿ ಸುಳ್ಳು ಹೇಳಿದ್ದಕ್ಕಾಗಿ ಗುಜರಾತ್ ಜನರಲ್ಲಿ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದರು. ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಹಿಂದಿನಿಂದಲೂ ಪರಸ್ಪರ ಬಿಜೆಪಿಯ 'ಬಿ' ಟೀಮ್ ಎಂದು ಕರೆಯುತ್ತಿವೆ.
ಕೇಜ್ರಿವಾಲ್ ಪ್ರಕಾರ, ಬಿಜೆಪಿಯು ರಾಜ್ಯದಲ್ಲಿ ಕಾಂಗ್ರೆಸ್ ಬಲಶಾಲಿಯಾಗಬೇಕೆಂದು ಬಯಸುತ್ತದೆ, ಇದರಿಂದಾಗಿ ಆಡಳಿತ ವಿರೋಧಿ ಮತಗಳು ವಿಭಜನೆಯಾಗುತ್ತವೆ. ಹೀಗಾಗಿ ಅದು ಕಾಂಗ್ರೆಸ್ ಅನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವು ಕಾಂಗ್ರೆಸ್ ಶಾಸಕರು ಕೇಸರಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಅವರು ಹೇಳಿದರು, ಆದರೆ ಈಗ ಬಿಜೆಪಿ ನಾಯಕರು ಕಾಂಗ್ರೆಸ್ ಅನ್ನು ತೊರೆಯದಂತೆ ಕೇಳಿಕೊಂಡಿದ್ದಾರೆ. ಆದ್ದರಿಂದ ಅದು ಮತ್ತಷ್ಟು ದುರ್ಬಲಗೊಳ್ಳುವುದಿಲ್ಲ' ಎಂದಿದ್ದಾರೆ.
Advertisement