ಕೇರಳದ ಪಾಲಕ್ಕಾಡ್‌ನಲ್ಲಿ ಬಸ್ ಗಳ ನಡುವೆ ಭೀಕರ ಅಪಘಾತ: 9 ಸಾವು, 38 ಮಂದಿಗೆ ಗಾಯ

ರಸ್ತೆ ಅಪಘಾತ, ಸಾವು-ನೋವಿನ ಘಟನೆಗಳು ಮತ್ತೆ ಮುಂದುವರಿದಿದೆ. ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ವಡಕ್ಕೆಂಚೇರಿ ಬಳಿ ಕೆಎಸ್ ಆರ್ ಟಿಸಿ ಮತ್ತು ಪ್ರವಾಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು 38 ಮಂದಿ ಗಾಯಗೊಂಡಿದ್ದಾರೆ. 
ಬಸ್ ಅಪಘಾತದ ದೃಶ್ಯ
ಬಸ್ ಅಪಘಾತದ ದೃಶ್ಯ

ಪಾಲಕ್ಕಾಡ್(ಕೇರಳ): ರಸ್ತೆ ಅಪಘಾತ, ಸಾವು-ನೋವಿನ ಘಟನೆಗಳು ಮತ್ತೆ ಮುಂದುವರಿದಿದೆ. ಇಂದು ಗುರುವಾರ ಮುಂಜಾನೆ ಪಾಲಕ್ಕಾಡ್‌ನ ವಡಕ್ಕಂಚೇರಿ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಎರ್ನಾಕುಲಂನ ಮುಳಂತುರುತಿಯಿಂದ ಪ್ರವಾಸಕ್ಕೆ ತೆರಳುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ 5 ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಇತರರು ಶಾಲಾ ಶಿಕ್ಷಕ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನ ಮೂವರು ಪ್ರಯಾಣಿಕರು ಸೇರಿದ್ದಾರೆ.12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 

ಪ್ರವಾಸಿ ಬಸ್ ಮುಳಂತುರುತಿಯ ಬಸೆಲಿಯೋಸ್ ವಿದ್ಯಾನಿಕೇತನ ಹಿರಿಯ ಮಾಧ್ಯಮಿಕ ಶಾಲೆಯ 41 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲಾ ಪ್ರವಾಸಕ್ಕೆ ಊಟಿಗೆ ಕರೆದೊಯ್ಯುತ್ತಿತ್ತು. ನಿನ್ನೆ ಬುಧವಾರ ಮಧ್ಯರಾತ್ರಿಯ ನಂತರ ವಡಕ್ಕಂಚೇರಿಯಲ್ಲಿ ಟೂರಿಸ್ಟ್ ಬಸ್ ಕೊಟ್ಟಾರಕ್ಕರ-ಕೊಯಮತ್ತೂರು ಸೂಪರ್‌ಫಾಸ್ಟ್ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಟೂರಿಸ್ಟ್ ಬಸ್ ಅತಿವೇಗದಿಂದ ಬಂದಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ದುರಂತಕ್ಕೆ ಟೂರಿಸ್ಟ್ ಬಸ್ ಚಾಲಕನ ಅತಿವೇಗದ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. 

ಮೃತರನ್ನು ವಿಷ್ಣು ವಿ ಕೆ (33ವ), ಅಂಜನಾ ಅಜಿತ್ (17ವ), ಇಮ್ಯಾನುಯೆಲ್ ಸಿ ಎಸ್ (17ವ), ಕ್ರಿಸ್ ವಿಂಟರ್ ಬಾರ್ನ್ ಥಾಮಸ್ (15ವ), ದಿಯಾ ರಾಜೇಶ್ (15ವ) ಮತ್ತು ಎಲ್ನಾ ಜೋಸ್ (15ವ) ಎಂದು ಗುರುತಿಸಲಾಗಿದೆ. ಮೃತ ಕೆಎಸ್‌ಆರ್‌ಟಿಸಿ ಪ್ರಯಾಣಿಕರನ್ನು ತ್ರಿಶೂರ್ ಮೂಲದ ರೋಹಿತ್ ರಾಜ್ (24ವ), ಒ.ಅನೂಪ್ (22ವ) ಮತ್ತು ದೀಪು (25ವ) ಎಂದು ಗುರುತಿಸಲಾಗಿದೆ.

ಸ್ಥಳದಿಂದ ನಾಪತ್ತೆಯಾಗಿದ್ದ ಪ್ರವಾಸಿ ಬಸ್ಸಿನ ಚಾಲಕ ಜೋಮೋನ್ ಪಾಲಕ್ಕಾಡ್‌ನ ವಡಕ್ಕೆಂಚೇರಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಿಂದ ಕೆಳಗೆ ಬಿದ್ದು ಹೊರಗೆ ಬಿದ್ದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com