ದೆಹಲಿ: ದೀಪಾವಳಿ ಹಬ್ಬದ ಆಚರಣೆ ವೇಳೆ ಮಿರಾಂಡಾ ಹೌಸ್‌ಗೆ ನುಗ್ಗಿದ ಪುಂಡರು; ವಿದ್ಯಾರ್ಥಿನಿಯರಿಗೆ ಕಿರುಕುಳ

ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯರು ಶುಕ್ರವಾರ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಪುಂಡರ ಗುಂಪೊಂದು ಕಾಲೇಜಿಗೆ ನುಗ್ಗಿ ಲೈಂಗಿಕ ಘೋಷಣೆಗಳನ್ನು ಕೂಗಿದೆ ಮತ್ತು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದೆ.
ಕಾರ್ಯಕ್ರಮ ಶುರುವಾದ ಗಂಟೆಯ ಬಳಿಕ ಕಾಲೇಜಿನೊಳಗೆ ಕಾಂಪೌಂಡ್ ಮೂಲಕ ಏರಲು ಯತ್ನಿಸುತ್ತಿದ್ದ ವಿದ್ಯಾರ್ಥಿ
ಕಾರ್ಯಕ್ರಮ ಶುರುವಾದ ಗಂಟೆಯ ಬಳಿಕ ಕಾಲೇಜಿನೊಳಗೆ ಕಾಂಪೌಂಡ್ ಮೂಲಕ ಏರಲು ಯತ್ನಿಸುತ್ತಿದ್ದ ವಿದ್ಯಾರ್ಥಿ

ನವದೆಹಲಿ: ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯರು ಶುಕ್ರವಾರ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಪುಂಡರ ಗುಂಪೊಂದು ಕಾಲೇಜಿಗೆ ನುಗ್ಗಿ ಲೈಂಗಿಕ ಘೋಷಣೆಗಳನ್ನು ಕೂಗಿದೆ ಮತ್ತು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದೆ. ಈ ಬಗ್ಗೆ ಹಲವಾರು ವಿದ್ಯಾರ್ಥಿನಿಯರು ಮತ್ತು ಹಾಸ್ಟೆಲ್ ವಾರ್ಡನ್‌ಗಳ ಎಚ್ಚರಿಕೆಯ ನಂತರ ನಿಗದಿತ ಸಮಯಕ್ಕಿಂತ ಮುಂಚೆಯೇ ಹಬ್ಬವನ್ನು ಮುಕ್ತಾಯಗೊಳಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನೆ ಘಟಕ ಒನೆಲ್ಲಾ ಆಯೋಜಿಸಿದ್ದ ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ದೆಹಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ಗುರುತಿನ ಚೀಟಿ ತೋರಿಸುವ ಷರತ್ತಿನ ಮೇಲೆ ಅವಕಾಶ ನೀಡಲಾಗಿತ್ತು. ಪ್ರವೇಶ ನಿರಾಕರಿಸಿದಾಗ ಅನೇಕ ಪುರುಷ ವಿದ್ಯಾರ್ಥಿಗಳು ಗೇಟ್ ಮೇಲಿಂದ ನುಗ್ಗಲು ಪ್ರಯತ್ನಿಸಿದರು ಎಂದು ಕಾಲೇಜು ವಿದ್ಯಾರ್ಥಿನಿ ಮತ್ತು ಘಟನೆಯ ಪ್ರತ್ಯಕ್ಷದರ್ಶಿ ಶೋಭನಾ ಪರ್ಮೋದ್ ಹೇಳಿದ್ದಾರೆ.

ಮಧ್ಯಾಹ್ನ 12.30 ರ ಸುಮಾರಿಗೆ ನೂರಾರು ವಿದ್ಯಾರ್ಥಿಗಳು ಗೇಟ್ ಸಂಖ್ಯೆ 4 ರ ಹೊರಗೆ ಜಮಾಯಿಸಿದರು. ಅವರಲ್ಲಿ ಕೆಲವರಿಗೆ ಪ್ರವೇಶ ನಿರಾಕರಿಸಿದಾಗ ಅವರು ಇತರ ಗೇಟ್‌ಗಳಿಂದ ಪ್ರವೇಶಿಸಲು ಪ್ರಯತ್ನಿಸಿದರು. ಅವರು ವಿದ್ಯಾರ್ಥಿನಿಯರನ್ನು ಬೆದರಿಸುತ್ತಿದ್ದರು ಎಂದು ಪರ್ಮೋದ್ ತಿಳಿಸಿದ್ದಾರೆ.

ಕೆಲ ಹುಡುಗರು ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಮತ್ತೊಬ್ಬ ವಿದ್ಯಾರ್ಥಿ ಆರೋಪಿಸಿದ್ದಾರೆ. 'ಅವರು ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಸಹ ಮಾಡಿದ್ದಾರೆ' ಎಂದು ಇನ್ನೊಬ್ಬ ವಿದ್ಯಾರ್ಥಿನಿ ಸುಪ್ರಿಯಾ ದೂರಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದ ಆಡಳಿತ ಮಂಡಳಿ ಹಾಗೂ ಪೊಲೀಸರ ವಿರುದ್ಧ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಖಂಡನಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಲೇಜು ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದೆ. "ಅವರು (ದುಷ್ಕರ್ಮಿಗಳು) ತರಗತಿಯಂತಹ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಿದರು. ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳ ವಿನಂತಿಗಳನ್ನು ನಿರ್ಲಕ್ಷಿಸಿ ಅಸಭ್ಯವಾಗಿ ಪ್ರತಿಕ್ರಿಯಿಸಿದರು. ಪುರುಷ ವಿದ್ಯಾರ್ಥಿಗಳ ಗುಂಪು ಕಾರಿಡಾರ್‌ಗಳಲ್ಲಿಯೂ ಘೋಷಣೆ ಕೂಗಿ, ಕಾಲೇಜಿನ ಆಸ್ತಿಯನ್ನು ಧ್ವಂಸ ಮಾಡಲು ಪ್ರಯತ್ನಿಸಿದೆ ಎಂದು ತಿಳಿಸಲಾಗಿದೆ.

'ಘಟನೆ ಬಳಿಕ ತರಗತಿಗಳನ್ನು ರದ್ದುಗೊಳಿಸಲಾಗಿದೆ ಮತ್ತು ವಿದ್ಯಾರ್ಥಿನಿಯರನ್ನು ಕಳುಹಿಸಲಾಗಿದೆ. ಕೆಲವು ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯರ ಪ್ರವೇಶ ಮತ್ತು ನಿರ್ಗಮನಕ್ಕೂ ಅಡ್ಡಿಯುಂಟಾಯಿತು' ಎಂದು ಮಹಿಳಾ ಅಭಿವೃದ್ಧಿ ಕೋಶದ ಹೇಳಿಕೆಯಲ್ಲಿ ತಿಳಿಸಿದೆ.

ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. 'ಕೆಲವು ವಿದ್ಯಾರ್ಥಿಗಳು ಕಾಲೇಜು ಗೋಡೆಗಳನ್ನು ಏರುವ ಮೂಲಕ ಕ್ಯಾಂಪಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅವರನ್ನು ತಡೆಯಲಾಯಿತು. ಬಳಿಕ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com