ಹಳೆಯ ಸವಾಲುಗಳನ್ನು ಬಿಟ್ಟು, ಹೊಸ ಸಾಧ್ಯತೆಗಳ ಲಾಭ ಪಡೆಯುವ ಸಮಯವಿದು: ಪ್ರಧಾನಿ ನರೇಂದ್ರ ಮೋದಿ

ಜಮ್ಮು ಮತ್ತು ಕಾಶ್ಮೀರ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಳೆಯ ಸವಾಲುಗಳನ್ನು ಬಿಟ್ಟು ಹೊಸ ಸಾಧ್ಯತೆಗಳ ಸಂಪೂರ್ಣ ಲಾಭ ಪಡೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಳೆಯ ಸವಾಲುಗಳನ್ನು ಬಿಟ್ಟು ಹೊಸ ಸಾಧ್ಯತೆಗಳ ಸಂಪೂರ್ಣ ಲಾಭ ಪಡೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರ ರೋಜ್‌ಗಾರ್ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು, ವೇಗದ ಅಭಿವೃದ್ಧಿಗಾಗಿ ಹೊಸ ವಿಧಾನ ಮತ್ತು ಹೊಸ ಚಿಂತನೆಯೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ. ಅಭಿವೃದ್ಧಿಯ ಲಾಭವನ್ನು ಎಲ್ಲಾ ವರ್ಗಗಳು ಮತ್ತು ನಾಗರಿಕರು ಸಮಾನವಾಗಿ ಪಡೆಯುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ನಾವೆಲ್ಲರೂ ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಸರ್ಕಾರಿ ಸೇವೆಗಳಿಗೆ ಸೇರುವ ಯುವಕರು ಪಾರದರ್ಶಕತೆಗೆ ಆದ್ಯತೆ ನೀಡಬೇಕು ಎಂದ ಅವರು, ಜಮ್ಮು ಮತ್ತು ಕಾಶ್ಮೀರದ 20 ವಿವಿಧ ಸ್ಥಳಗಳಲ್ಲಿ ಸರ್ಕಾರಿ ಕೆಲಸ ಮಾಡಲು ನೇಮಕಾತಿ ಪತ್ರಗಳನ್ನು ಪಡೆದ 3,000 ಯುವಕರನ್ನು ಅಭಿನಂದಿಸಿದರು.

ಈ ಯುವಕರು ಪಿಡಬ್ಲ್ಯೂಡಿ, ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಶುಸಂಗೋಪನೆ, ಜಲಶಕ್ತಿ ಮತ್ತು ಶಿಕ್ಷಣ-ಸಂಸ್ಕೃತಿಯಂತಹ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶಗಳನ್ನು ಪಡೆಯುತ್ತಾರೆ. ಮುಂದಿನ ದಿನಗಳಲ್ಲಿ ಇತರ ಇಲಾಖೆಗಳಲ್ಲಿ 700ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಪ್ರಧಾನಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳವನ್ನು ಉಲ್ಲೇಖಿಸಿದ ಪ್ರಧಾನಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೆಚ್ಚಿದ ಸಂಪರ್ಕದಿಂದಾಗಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವು ಉತ್ತೇಜನವನ್ನು ಪಡೆದುಕೊಂಡಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳು ಯಾವುದೇ ತಾರತಮ್ಯವಿಲ್ಲದೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.

ಎರಡು ಹೊಸ ಏಮ್ಸ್, ಏಳು ಹೊಸ ವೈದ್ಯಕೀಯ ಕಾಲೇಜುಗಳು, ಎರಡು ರಾಜ್ಯ ಕ್ಯಾನ್ಸರ್ ಸಂಸ್ಥೆಗಳು ಮತ್ತು 15 ನರ್ಸಿಂಗ್ ಕಾಲೇಜುಗಳನ್ನು ತೆರೆಯುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ರೈಲುಗಳ ಮೂಲಕ ಕಾಶ್ಮೀರಕ್ಕೆ ಸಂಪರ್ಕವನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ನಾನು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಜನರನ್ನು ಭೇಟಿಯಾಗಲು ಬಯಸಿದಾಗಲೆಲ್ಲಾ ನಾನು ಅವರ ನೋವನ್ನು ಅನುಭವಿಸುತ್ತೇನೆ. ಇದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ನೋವು. ಜಮ್ಮು ಮತ್ತು ಕಾಶ್ಮೀರದ ಜನರು ಭ್ರಷ್ಟಾಚಾರವನ್ನು ದ್ವೇಷಿಸುತ್ತಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಅವರ ತಂಡವು ಭ್ರಷ್ಟಾಚಾರದ ದುಷ್ಪರಿಣಾಮಗಳನ್ನು ಬೇರುಸಹಿತ ಕಿತ್ತೊಗೆಯಲು ಮಾಡಿದ ಗಮನಾರ್ಹ ಕೆಲಸಕ್ಕಾಗಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com