ಲೈಂಗಿಕ ಕಿರುಕುಳಕ್ಕೆ ವಿರೋಧ: ಮಹಿಳೆಯನ್ನು ರೈಲಿಂದ ಹೊರಕ್ಕೆ ತಳ್ಳಿದ ವ್ಯಕ್ತಿ, ತಾಯಿ ಕಾಣದೆ ಕಂಗಲಾದ ಮಗು!

ಲೈಂಗಿಕ ಕಿರಕುಳವನ್ನು ವಿರೋಧಿಸಿದ ಮಹಿಳೆಯನ್ನು ವ್ಯಕ್ತಿಯೊಬ್ಬ ರೈಲಿನಿಂದ ಹೊರಕ್ಕೆ ತಳ್ಳಿದ್ದು ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ.
ಮೃತದೇಹ ಪರಿಶೀಲಿಸುತ್ತಿರುವ ಪೊಲೀಸರು
ಮೃತದೇಹ ಪರಿಶೀಲಿಸುತ್ತಿರುವ ಪೊಲೀಸರು

ಚಂಡೀಗಢ: ಲೈಂಗಿಕ ಕಿರಕುಳವನ್ನು ವಿರೋಧಿಸಿದ ಮಹಿಳೆಯನ್ನು ವ್ಯಕ್ತಿಯೊಬ್ಬ ರೈಲಿನಿಂದ ಹೊರಕ್ಕೆ ತಳ್ಳಿದ್ದು ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ. 

ತನಗೆ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯನ್ನು ಹಿಮ್ಮೆಟ್ಟಿಸಿದ ಕಾರಣಕ್ಕೆ 30 ವರ್ಷದ ಮಹಿಳೆಯನ್ನು ಚಲಿಸುವ ರೈಲಿನಿಂದ ವ್ಯಕ್ತಿ ಹೊರಕ್ಕೆ ತಳ್ಳಿದ ಘಟನೆ ಹರಿಯಾಣದ ಫತೇಬಾದ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತನ್ನ ಒಂಬತ್ತು ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಫತೇಬಾದ್‌ನ ತೋಹಾನಾ ಪಟ್ಟಣದ ನಿಲ್ದಾಣಕ್ಕೆ ರೈಲು ಬಂದಾಗ, ಮಹಿಳೆಯ ಪತಿ ಮಗು ಒಂಟಿಯಾಗಿ ಅಳುತ್ತಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದರು. ಮಗು ರೈಲಿನ ಬೋಗಿಯಲ್ಲಿ ನಡೆದಿದ್ದನ್ನ ತಂದೆಯ ಬಳಿ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ವೇಳೆ ಮೂವರು ಪ್ರಯಾಣಿಕರನ್ನು ಹೊರತುಪಡಿಸಿ ಇಡೀ ಕೋಚ್ ಖಾಲಿಯಾಗಿತ್ತು ಎಂದು ಫತೇಬಾದ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿದ್ದುದನ್ನು ಕಂಡ ಆರೋಪಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದು, ಈ ವೇಳೆ ಆಕೆ ಜಗಳವಾಡಿ ವಿರೋಧಿಸಿದ್ದಾಳೆ. ಮಗು ಹೇಳಿಕೆ ಉಲ್ಲೇಖಿಸಿದ ಪೊಲೀಸರು, ಆ ವ್ಯಕ್ತಿ ಮಹಿಳೆಯನ್ನು ರೈಲಿನಿಂದ ಹೊರಗೆ ತಳ್ಳಿ ತಾನೂ ರೈಲಿನಿಂದ ಜಿಗಿದಿದ್ದಾನೆ ಎಂದು ಹೇಳಿದ್ದಾರೆ.

ಸ್ಟೇಷನ್ ಗೆ ರೈಲು ಬಂದಾಗ ಅಳುತ್ತಿದ್ದ ನನ್ನ ಮಗ ನನ್ನ ಬಳಿಗೆ ಓಡಿ ಬಂದನು. ಒಬ್ಬ ವ್ಯಕ್ತಿ ಅಮ್ಮನನ್ನು ರೈಲಿನ ಬಾಗಿಲಿನಿಂದ ತಳ್ಳಿದನೆಂದು ಮಗ ನನ್ನ ಬಳಿ ಹೇಳಿದ. ರೈಲು 20 ಕಿ.ಮೀ ದೂರದಲ್ಲಿದ್ದಾಗ ಮೊಬೈಲ್‌ಗೆ ಕರೆ ಮಾಡಿ ರೈಲ್ವೆ ಸ್ಟೇಷನ್ ಗೆ  ಬಂದು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಆದರೆ ಈಗ ಆಕೆ ಇಲ್ಲ ಎಂದು ಕಂಗಾಲಾದ ಪತಿ ಹೇಳಿದರು.

ಘಟನೆ ನಂತರ ಪೊಲೀಸರು ಆರೋಪಿಯನ್ನು ಕಂಡುಹಿಡಿದು ಆತನನ್ನು 27ವರ್ಷದ  ಸಂದೀಪ್ ಎಂದು ಗುರುತಿಸಲಾಗಿದೆ. ರೈಲಿನಿಂದ ಜಿಗಿದ ಕಾರಣ ಆತ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪ ಸಂಬಂಧ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ ಅಥವಾ ಜಿಆರ್‌ಪಿ ಎಫ್ ಐಆರ್  ದಾಖಲಿಸಿದೆ.

ಮಹಿಳೆಯು ಕಳೆದ ಕೆಲವು ದಿನಗಳಿಂದ ರೋಹ್ಟಕ್‌ನಲ್ಲಿ ತಂಗಿದ್ದು ಗುರುವಾರ ರಾತ್ರಿ ಟೊಹಾನಾಗೆ ಮರಳಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಪೊಲೀಸರು ಮತ್ತು ಮಹಿಳೆಯ ಕುಟುಂಬವು ಮಧ್ಯರಾತ್ರಿಯವರೆಗೂ ರೈಲ್ವೆ ಹಳಿಯಲ್ಲಿ ಆಕೆಯ ಶವಕ್ಕಾಗಿ ಭಾರೀ ಹುಡುಕಾಟ ನಡೆಸಿತು. ಕತ್ತಲು ಮತ್ತು ಟ್ರ್ಯಾಕ್ ಉದ್ದಕ್ಕೂ ಎತ್ತರದ ಪೊದೆಗಳಿಂದ ಹುಡುಕಾಟವು ಕಷ್ಟಕರವಾಗಿತ್ತು. ಶುಕ್ರವಾರ ಬೆಳಗ್ಗೆ ಶವ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com