ಉತ್ತರ ಪ್ರದೇಶದಲ್ಲಿ ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ: ನಾಲ್ವರು ದುರ್ಮರಣ, 14 ಮಂದಿಗೆ ಗಾಯ

ನಿಂತಿದ್ದ ಬಸ್‌ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್
ಅಪಘಾತಕ್ಕೀಡಾದ ಬಸ್

ಬಾರಾಬಂಕಿ: ವಲಸೆ ಕಾರ್ಮಿಕರಿದ್ದ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಸುಮಾರು 24 ಮಂದಿ ಗಾಯಗೊಂಡಿರೋ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಬಾರಾಬಂಕಿಯ ಮಹುಂಗುಪುರ ಬಳಿ ಡಬಲ್ ಡೆಕ್ಕರ್ ಬಸ್ ಗೆ ಹಿಂದಿನಿಂದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ನೇಪಾಳಿ ವಲಸೆ ಕಾರ್ಮಿಕರನ್ನು ಹೊತ್ತ ಡಬಲ್ ಡೆಕ್ಕರ್ ಬಸ್ ಗೋವಾಕ್ಕೆ ತೆರಳುತ್ತಿದ್ದಾಗ ಅದರ ಒಂದು ಟೈರ್ ಪಂಕ್ಚರ್ ಆಗಿದೆ. ನಂತರ ಬಸ್ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಾಯಿಸುವ ಮಧ್ಯೆ ವೇಗವಾಗಿ ಬಂದ ಟ್ರಕ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಸುಮಾರು 60 ಪ್ರಯಾಣಿಕರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾರಾಬಂಕಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆರು ಗಾಯಾಳುಗಳನ್ನು ಲಕ್ನೋ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ ಎಂದು ಬಾರಾಬನಿ ಹಿರಿಯ ಪೊಲೀಸ್ ಅಧಿಕಾರಿ ಪೂರ್ಣೇಂದು ಸಿಂಗ್ ತಿಳಿಸಿದ್ದಾರೆ. ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರನ್ನು ನೇಪಾಳಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ಉತ್ತರ ಪ್ರದೇಶವು 2021 ರಲ್ಲಿ 24,711 ಸಾವುಗಳೊಂದಿಗೆ ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ.

2021 ರಲ್ಲಿ ದೇಶದಲ್ಲಿ ಸಂಭವಿಸಿದ ಸುಮಾರು 4.22 ಲಕ್ಷ ಟ್ರಾಫಿಕ್ ಅಪಘಾತಗಳಲ್ಲಿ 1.73 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com