ಸರ್ಕಾರಿ ಶಾಲೆಯಲ್ಲಿ ದಲಿತ ಬಾಲಕಿಯರು ಊಟ ಬಡಿಸಿದ್ದಕ್ಕೆ ಆಕ್ಷೇಪ: ಅಡುಗೆ ತಯಾರಕನ ಬಂಧನ

ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರು ಊಟ ಬಡಿಸಿದರೆಂದು ಅವರ ವಿರುದ್ಧ ತಾರತಮ್ಯ ಎಸಗಿದ ಆರೋಪದ ಮೇಲೆ ರಾಜಸ್ತಾನದ ಉದಯಪುರ ಜಿಲ್ಲೆಯಲ್ಲಿ ಅಡುಗೆಯವರನ್ನು ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉದಯಪುರ: ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರು ಊಟ ಬಡಿಸಿದರೆಂದು ಅವರ ವಿರುದ್ಧ ತಾರತಮ್ಯ ಎಸಗಿದ ಆರೋಪದ ಮೇಲೆ ರಾಜಸ್ತಾನದ ಉದಯಪುರ ಜಿಲ್ಲೆಯಲ್ಲಿ ಅಡುಗೆಯವರನ್ನು ಬಂಧಿಸಲಾಗಿದೆ.

ದಲಿತ ಹುಡುಗಿಯರು ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲಾ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ಬಡಿಸಿದ್ದರು ಎಂದು ವರದಿಯಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಊಟ ಬಡಿಸಿದ ಕಾರಣ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಊಟವನ್ನು ಎಸೆಯುವಂತೆ ಹೇಳಿದ್ದರು. ಅದರಂತೆ ವಿದ್ಯಾರ್ಥಿಗಳು ಅಡುಗೆಯವನ ಸೂಚನೆಯನ್ನು ಅನುಸರಿಸಿ ಊಟವನ್ನು ಎಸೆದರು.

ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ನಂತರ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ ಅಡುಗೆಯವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಅಡುಗೆ ತಯಾರಿಸಿದವನ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಹುಡುಗಿಯರು ಊಟ ಬಡಿಸಿದ ಕಾರಣ ವಿದ್ಯಾರ್ಥಿಗಳು ಆಹಾರವನ್ನು ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಡುಗೆಯವನು ತನ್ನ ಆಯ್ಕೆಯ ಮೇಲ್ವರ್ಗದ ವಿದ್ಯಾರ್ಥಿಗಳಿಂದ ಊಟ ಬಡಿಸುತ್ತಿದ್ದನು. ಆದರೆ ನಿನ್ನೆ ಶಿಕ್ಷಕರೊಬ್ಬರು ದಲಿತ ಹುಡುಗಿಯರಿಗೆ ಊಟ ಬಡಿಸುವಂತೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com