ಭದ್ರತಾ ಸಿಬ್ಬಂದಿಗೆ ಪದೇ ಪದೆ ಕಪಾಳಮೋಕ್ಷ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆ, ನೋಯ್ಡಾ ಮಹಿಳೆ ಬಂಧನ

ಐಷಾರಾಮಿ ನೋಯ್ಡಾ ಕಾಂಪ್ಲೆಕ್ಸ್‌ನಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗೆ ಪದೇ ಪದೆ ಕಪಾಳಮೋಕ್ಷ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೋಯ್ಡಾ: ಐಷಾರಾಮಿ ನೋಯ್ಡಾ ಕಾಂಪ್ಲೆಕ್ಸ್‌ನಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗೆ ಪದೇ ಪದೆ ಕಪಾಳಮೋಕ್ಷ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮತ್ತೊಬ್ಬ ಮಹಿಳೆ ಇದೇ ರೀತಿಯಲ್ಲಿ ಸೆಕ್ಯುರಿಟಿ ಗಾರ್ಡ್‌‌ರನ್ನು ಅವಾಚ್ಯವಾಗಿ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಕೆಲವೇ ವಾರಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಪೊಲೀಸರು ಮಹಿಳೆಯನ್ನು ಬಂಧಿಸಿದ್ದರು. ಆದರೆ, ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ.

ಶನಿವಾರ ಮಧ್ಯಾಹ್ನ, 3 ನೇ ಹಂತದ ಕೊಟ್ವಾಲಿ ನೆರೆಹೊರೆಯಲ್ಲಿರುವ ಕ್ಲಿಯೋ ಕೌಂಟಿ ಸೊಸೈಟಿಯ ಆವರಣದಲ್ಲಿ ಮಹಿಳೆಯು ನಡೆದುಕೊಂಡು ಬರುತ್ತಿರುವುದನ್ನು ನೋಡಬಹುದು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಠಾತ್ತನೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ, ಕುರ್ತಿಯನ್ನು ಧರಿಸಿದ್ದ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಯೆಡೆಗೆ ಬರುತ್ತಾರೆ. ಇದಾದ ಸ್ವಲ್ಪ ಸಮಯದ ನಂತರ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಾರೆ. ಏಕಾಏಕಿ ಮುಗಿಬಿದ್ದು ದಾಳಿ ನಡೆಸುವ ಮಹಿಳೆಯು ನಿಂದಿಸಿದ್ದಾರೆ. ಅಲ್ಲೇ ಇದ್ದ ಇನ್ನಿಬ್ಬರು ಭದ್ರತಾ ಸಿಬ್ಬಂದಿ ಘಟನೆ ನಡೆಯುವುದನ್ನು ವೀಕ್ಷಿಸುತ್ತಿದ್ದಾರೆ ಮತ್ತು ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾರೆ.

ವರದಿಗಳ ಪ್ರಕಾರ, ವೈರಲ್ ವಿಡಿಯೋದಲ್ಲಿರುವ ಮಹಿಳೆಯನ್ನು ಪ್ರೊಫೆಸರ್ ಸುತಾಪ ದಾಸ್ ಎಂದು ಗುರುತಿಸಲಾಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೆಕ್ಟರ್ 121, ಹಂತ 3 ರಲ್ಲಿ ಈ ಘಟನೆ ನಡೆದಿದೆ.

ಘಟನೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. 'ಇನ್ನೊಬ್ಬ ಭದ್ರತಾ ಸಿಬ್ಬಂದಿ ಫೋನ್‌ನಲ್ಲಿ ಘಟನೆಯನ್ನು ಸೆರೆಹಿಡಿಯಲು ತ್ವರಿತವಾಗಿ ಪ್ರತಿಕ್ರಿಯಿಸಿದರು. ಆದರೆ ಯಾರೂ ಸಂತ್ರಸ್ತನನ್ನು ಕಾಪಾಡಲು ಮುಂದಾಗಲಿಲ್ಲ' ಎಂದು ಒಬ್ಬರು ಬರೆದಿದ್ದಾರೆ.

ಮತ್ತೊಬ್ಬರು, 'ಇಂತಹ ಘಟನೆಗಳು ಗುರುಗ್ರಾಮ ಅಥವಾ ನೋಯ್ಡಾದಲ್ಲಿ ಮಾತ್ರ ಏಕೆ ನಿಯಮಿತವಾಗಿ ನಡೆಯುತ್ತಿವೆ? ಎಂದಿದ್ದರೆ, ಇನ್ನು ಒಬ್ಬರು 'ಪ್ರೊಫೆಸರ್ ಹೀಗಿದ್ದರೆ ನಮ್ಮ ಸಮಾಜ ಹೇಗಿರುತ್ತದೆ?' ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com