ಗುಳ್ಳೆಗಳು ನಮ್ಮನ್ನು ತಡೆಯುವುದಿಲ್ಲ, ನಾವು ಭಾರತವನ್ನು ಒಂದುಗೂಡಿಸುತ್ತೇವೆ: ರಾಹುಲ್ ಗಾಂಧಿ

ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಸಾರ್ವಜನಿಕರ ದಟ್ಟಣೆಯ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಳೆ ಬರುತ್ತಿದ್ದರೂ ಕೂಡ, ಛತ್ರಿಯಿಲ್ಲದೆ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಬೆಂಬಲಿಗರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ತಿರುವನಂತಪುರಂನಲ್ಲಿ ರಾಹುಲ್ ಗಾಂಧಿ
ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ತಿರುವನಂತಪುರಂನಲ್ಲಿ ರಾಹುಲ್ ಗಾಂಧಿ

ತಿರುವನಂತಪುರ: ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಸಾರ್ವಜನಿಕರ ದಟ್ಟಣೆಯ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಳೆ ಬರುತ್ತಿದ್ದರೂ ಕೂಡ, ಛತ್ರಿಯಿಲ್ಲದೆ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಬೆಂಬಲಿಗರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3,500 ಕಿಮೀ ಕಾಲ್ನಡಿಗೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ, ಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಕಾಲುಗಳಲ್ಲಿ ಏಳುವ ಗುಳ್ಳೆಗಳಿಂದ ಬಳಲುತ್ತಿದ್ದರೂ, ಅಭಿಯಾನವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಮಳೆಯ ನಡುವೆಯೂ ನೂರಾರು ಜನರು ರಸ್ತೆಬದಿಯಲ್ಲಿ ಸಾಲುಗಟ್ಟಿ ನಿಂತು ರಾಹುಲ್ ಗಾಂಧಿ ಮತ್ತು ಇತರ ಯಾತ್ರಿಗಳಿಗೆ ಶುಭಾಶಯ ಕೋರಿದರು.

ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ನಾವು ದೇಶವನ್ನು ಒಂದುಗೂಡಿಸಲು ಹೊರಟಿದ್ದೇವೆ. ಹೀಗಾಗಿ ಕಾಲುಗಳಲ್ಲಿ ಗುಳ್ಳೆಗಳು ಎದ್ದರೂ, ಈ ಯಾತ್ರೆಯನ್ನು ನಿಲ್ಲಿಸಲು ಹೋಗುವುದಿಲ್ಲ. #BharatJodoYatra' ಎಂದು ಹೇಳಿರುವ ಗಾಂಧಿ, ಅದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ್ದಾರೆ.

ಕಜಕೂಟಂ ಬಳಿಯ ಕನಿಯಾಪುರಂನಿಂದ ಬೆಳಿಗ್ಗೆ 7.15 ರ ಸುಮಾರಿಗೆ ಪ್ರಾರಂಭವಾದ ಮೂರನೇ ದಿನದ ಯಾತ್ರೆಯು ಹಿಂದಿನ ಎರಡು ದಿನಗಳ ಕೇರಳದ ಪಾದಯಾತ್ರೆಯಂತೆಯೇ ಜನರ ಉತ್ತೇಜಕ ಪಾಲ್ಗೊಳ್ಳುವಿಕೆಯನ್ನು ಕಂಡಿತು.

ಯಾತ್ರೆಯು ಇಲ್ಲಿನ ಅಟ್ಟಿಂಗಲ್‌ನಲ್ಲಿ ದಿನದ ಮೊದಲ ನಿಲುಗಡೆ ಹಂತವನ್ನು ತಲುಪಿದಾಗ, ಎಐಸಿಸಿ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, 'ಪಾದಯಾತ್ರೆಯು ಅಟ್ಟಿಂಗಲ್ ಬಳಿಯ ಮಾಮೋಮ್‌ನಲ್ಲಿ ಬೆಳಿಗ್ಗೆ ಬ್ರೇಕ್ ಪಾಯಿಂಟ್‌ಗೆ ತಲುಪಿದೆ. ಅಲ್ಲಿ ವಿವಿಧ ಗುಂಪುಗಳೊಂದಿಗೆ ಹಲವಾರು ಸಂವಾದಗಳು ನಡೆಯಲಿವೆ' ಎಂದಿದ್ದರು.

ಯಾತ್ರೆಯು ಸಂಜೆ 5 ಗಂಟೆಗೆ ಪುನರಾರಂಭಗೊಂಡು ಇಲ್ಲಿನ ಕಲ್ಲಂಬಲಂ ಜಂಕ್ಷನ್‌ನಲ್ಲಿ ದಿನದ ಯಾತ್ರೆ ಅಂತ್ಯಗೊಳ್ಳಲಿದೆ. ಸೋಮವಾರ ಸಂಜೆ ಕಜಕೂಟಂ ತಲುಪಿದಾಗ ಯಾತ್ರೆ 100 ಕಿಲೋಮೀಟರ್ ಕ್ರಮಿಸಿತ್ತು.

ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, 'ಚುನಾವಣೆಯನ್ನು ದ್ವೇಷ, ಹಿಂಸಾಚಾರ ಮತ್ತು ಕೋಪದಿಂದ ಗೆಲ್ಲಬಹುದು. ಆದರೆ, ದೇಶ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಇದರಿಂದ ಪರಿಹರಿಸಲು ಸಾಧ್ಯವಿಲ್ಲ' ಎಂದರು.

'ಭಾರತದ ಕನಸು ಮುರಿದು ಹೋಗಿದೆ, ಚದುರಿ ಹೋಗಿಲ್ಲ. ಆ ಕನಸನ್ನು ನನಸಾಗಿಸಲು ನಾವು ಭಾರತವನ್ನು ಒಟ್ಟುಗೂಡಿಸುತ್ತಿದ್ದೇವೆ. 100 ಕಿಮೀ ಯಾತ್ರೆ ಮುಗಿದಿದೆ ಮತ್ತು ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯು ನಿಖರವಾಗಿ 100 ಕಿಮೀ ಪೂರೈಸಿದೆ ಮತ್ತು ಇದು ಬಿಜೆಪಿಯನ್ನು ಕಲಕಿದೆ, ಆತಂಕಕ್ಕೀಡು ಮಾಡಿದೆ ಮತ್ತು ಕಾಂಗ್ರೆಸ್ ಪಕ್ಷವನ್ನು ಈಗಾಗಲೇ 100 ಪಟ್ಟು ರಿಫ್ರೆಶ್ ಮಾಡಿದೆ. ನಾವು ನಡೆಯುವ ಪ್ರತಿ ಹೆಜ್ಜೆಯೂ ನಮ್ಮ ಸಂಕಲ್ಪವನ್ನು ನವೀಕರಿಸುತ್ತದೆ! ಎಂದು ರಮೇಶ್ ಟ್ವೀಟ್ ಮಾಡಿದ್ದರು.

150 ದಿನಗಳ ಪಾದಯಾತ್ರೆಯನ್ನು ನೆರೆಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7 ರಂದು ಪ್ರಾರಂಭಿಸಲಾಯಿತು ಮತ್ತು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಈ ಯಾತ್ರೆ ಒಳಗೊಂಡಿದೆ.

ಸೆಪ್ಟೆಂಬರ್ 10 ರಂದು ಸಂಜೆ ಕೇರಳವನ್ನು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸುವ ಮೊದಲು 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳನ್ನು ಮುಟ್ಟುವ ಮೂಲಕ 450 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com