ಎಎಪಿ ಶಾಸಕರಿಗೆ ಹಣದ ಆಫರ್ ಆರೋಪ; ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಪಂಜಾಬ್ ಪೊಲೀಸರು

ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಶಾಸಕರನ್ನು ಕೊಂಡುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಎಎಪಿ ರಾಜ್ಯ ಡಿಜಿಪಿಗೆ ದೂರು ನೀಡಿದ ನಂತರ ಪಂಜಾಬ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಲೋಗೋ
ಬಿಜೆಪಿ ಲೋಗೋ

ಚಂಡೀಗಢ: ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಶಾಸಕರನ್ನು ಕೊಂಡುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಎಎಪಿ ರಾಜ್ಯ ಡಿಜಿಪಿಗೆ ದೂರು ನೀಡಿದ ನಂತರ ಪಂಜಾಬ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಪಕ್ಷದ ಶಾಸಕರೊಂದಿಗೆ ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯವರು ತಲಾ 25 ಕೋಟಿ ರೂಪಾಯಿಗಳ ಆಫರ್‌ನೊಂದಿಗೆ ತನ್ನ 10 ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು ಪಂಜಾಬ್‌ನ ಆಡಳಿತಾರೂಢ ಎಎಪಿ ಈ ಹಿಂದೆ ಆರೋಪಿಸಿತ್ತು.

ರಾಜ್ಯದ ಕೆಲವು ಶಾಸಕರು ನೀಡಿದ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು ಭಾರತೀಯ ದಂಡ ಸಂಹಿತೆಯ 171-ಬಿ ಮತ್ತು 120-ಬಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ಅನ್ನು ದಾಖಲಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

'ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಥಮಿಕವಾಗಿ ಎಫ್ಐಆರ್ ಅನ್ನು ದಾಖಲಿಸಿದ್ದಾರೆ ಮತ್ತು ಪ್ರಮಾಣಿತ ಮಾರ್ಗಸೂಚಿಗಳ ಪ್ರಕಾರ ತನಿಖೆಯನ್ನು ವಿಜಿಲೆನ್ಸ್ ಬ್ಯೂರೋಗೆ ವರ್ಗಾಯಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಎಎಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಈ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಕೋರಿದರು. ಈ ಆರೋಪಗಳು 'ಅತ್ಯಂತ ಹಾಸ್ಯಾಸ್ಪದ' ಎಂದು ವಿವರಿಸಿದ್ದಾರೆ. ರಾಜ್ಯದಲ್ಲಿ ಕುದುರೆ ವ್ಯಾಪಾರದ ಆರೋಪಗಳ ಬಗ್ಗೆ ಬಿಜೆಪಿ ವಿರುದ್ಧ ಸಾಕ್ಷ್ಯವನ್ನು ಒದಗಿಸುವಂತೆಯೂ ಎಎಪಿಗೆ ಕೇಳಿದೆ.

ಚೀಮಾ ಅವರು ಪಕ್ಷದ ಶಾಸಕರಾದ ಬುಧ್ ರಾಮ್, ಕುಲ್ವಂತ್ ಪಂಡೋರಿ, ಮಂಜಿತ್ ಸಿಂಗ್ ಬಿಲಾಸ್ಪುರ್, ದಿನೇಶ್ ಚಡ್ಡಾ, ರಮಣ್ ಅರೋರಾ, ನರಿಂದರ್ ಕೌರ್ ಭರಾಜ್, ರಜನೀಶ್ ದಹಿಯಾ, ರೂಪಿಂದರ್ ಸಿಂಗ್ ಹ್ಯಾಪಿ, ಶೀತಲ್ ಅಂಗುರಾಲ್ ಮತ್ತು ಲಾಭ್ ಸಿಂಗ್ ಉಗೋಕೆ ಅವರೊಂದಿಗೆ ಬುಧವಾರ ಡಿಜಿಪಿ ಕಚೇರಿಗೆ ಬಂದಿದ್ದರು.

ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚೀಮಾ, 'ಬಿಜೆಪಿಯ 'ಅಪವಿತ್ರ ತಂತ್ರಗಳನ್ನು' ಬಹಿರಂಗಪಡಿಸಲು, ನಾನು ಮತ್ತು ಎಎಪಿ ಶಾಸಕರು ಈ ವಿಷಯದ ಬಗ್ಗೆ ನ್ಯಾಯಯುತವಾದ ತನಿಖೆಗಾಗಿ ಡಿಜಿಪಿ ಯಾದವ್ ಅವರಿಗೆ 'ಎಲ್ಲಾ ಪುರಾವೆಗಳೊಂದಿಗೆ' ಔಪಚಾರಿಕ ದೂರು ನೀಡಿದ್ದೇವೆ. ಅಲ್ಲದೆ, ಜಲಂಧರ್ ಪಶ್ಚಿಮದ ಶಾಸಕ ಶೀತಲ್ ಅಂಗುರಾಲ್ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಬಿಜೆಪಿ ನಾಯಕರು ಮತ್ತು ಏಜೆಂಟರ ವಿರುದ್ಧವೂ ದೂರು ದಾಖಲಿಸಲಾಗಿದೆ' ಎಂದು ಅವರು ಹೇಳಿದರು.

'ಸಾಕ್ಷ್ಯವನ್ನು ಬಹಿರಂಗಪಡಿಸಿದರೆ, ಕೊಲ್ಲಲಾಗುವುದು ಎಂದು ಶಾಸಕರಿಗೆ ಬೆದರಿಕೆ ಒಡ್ಡಿದ್ದು, ಇದಕ್ಕೆ ನಮ್ಮ ಬಳಿ ಪುರಾವೆಯೂ ಇದೆ' ಎಂದು ಚೀಮಾ ಹೇಳಿದ್ದಾರೆ.

ಬಿಜೆಪಿ ಏಜೆಂಟರು ಮತ್ತು ಕಾರ್ಯಕರ್ತರು ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರವನ್ನು ಉರುಳಿಸಲು ಎಎಪಿಯ 35 ಶಾಸಕರಿಗೆ ಆಫರ್ ಮಾಡಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿವಿಧ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಆದರೆ, ಪಂಜಾಬ್‌ನಲ್ಲಿ ಆಪರೇಷನ್ ಕಮಲ ಸಂಪೂರ್ಣ ವಿಫಲವಾಗಿದೆ. ಇತರ ರಾಜ್ಯಗಳಲ್ಲಿ ಎಎಪಿಯ ಹೆಚ್ಚುತ್ತಿರುವ ಅಲೆಯಿಂದಾಗಿ ಬಿಜೆಪಿಗೆ ಭಯ ಇದೆ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com