ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ಯಿಂದ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ವಿಚಾರಣೆ
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
Published: 16th September 2022 02:42 PM | Last Updated: 16th September 2022 03:02 PM | A+A A-

ಸತ್ಯೇಂದ್ರ ಜೈನ್
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳು ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 ರ ಅಡಿಯಲ್ಲಿ ಜೈನ್ ಮತ್ತು ಇತರರ ವಿರುದ್ಧ 2017 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.
ತನಿಖೆಯ ಸಂದರ್ಭದಲ್ಲಿ ಮಾರ್ಚ್ 3 ರಂದು ಇ.ಡಿ, ತಾತ್ಕಾಲಿಕವಾಗಿ ಅಕಿಂಚನ್ ಡೆವಲಪರ್ಸ್ ಪ್ರೈ.ಲಿ., ಇಂಡೋ ಮೆಟಾಲಿಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರ್ಯಾಸ್ ಇನ್ಫೋಸಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮಂಗಳಾಯತನ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಜೆ.ಜೆ. ಐಡಿಯಲ್ ಎಸ್ಟೇಟ್ ಪ್ರೈ. ಲಿಮಿಟೆಡ್ ಮತ್ತು ಇತರರ 4.18 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಜಪ್ತಿ ಮಾಡಿತ್ತು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಸತ್ಯೇಂದ್ರ ಜೈನ್ ಗೆ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ
ಸತ್ಯೇಂದ್ರ ಜೈನ್, ಅವರ ಪತ್ನಿ ಪೂನಂ ಜೈನ್ ಹಾಗೂ ಇತರರ ವಿರುದ್ಧ ಸಿಬಿಐ 2018ರ ಡಿಸೆಂಬರ್ 3ರಂದು ಚಾರ್ಚ್‌ಶೀಟ್ ದಾಖಲಿಸಿತ್ತು. ಸತ್ಯೇಂದ್ರ ಜೈನ್ ಅವರು ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ 2015ರ ಫೆಬ್ರುವರಿ 14ರಿಂದ 2017ರ ಮೇ 31ರ ಅವಧಿಯಲ್ಲಿ, ಘೋಷಿತ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದರು ಎಂದು ಅದರಲ್ಲಿ ಆರೋಪಿಸಲಾಗಿತ್ತು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈನ್ ಅವರನ್ನು ಮೇ 30ರಂದು ಬಂಧಿಸಲಾಯಿತು ಮತ್ತು ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರನ್ನು ಜೂನ್ 30ರಂದು ಬಂಧಿಸಲಾಯಿತು. ಈ ಮೂವರು ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.