ಕೇರಳ: 20 ಸಾವಿರ ಸಮವಸ್ತ್ರಧಾರಿ RSS ಸ್ವಯಂಸೇವಕರ ಮುಂದೆ ಮೋಹನ್ ಭಾಗವತ್ ಭಾಷಣ!
ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಅವರು 20,000 'ಸಮವಸ್ತ್ರಧಾರಿ' ಆರ್‌ಎಸ್‌ಎಸ್ ಸ್ವಯಂಸೇವಕರ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Published: 18th September 2022 03:20 PM | Last Updated: 19th September 2022 02:17 PM | A+A A-

ಮೋಹನ್ ಭಾಗವತ್
ತ್ರಿಶೂರ್(ಕೇರಳ): ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಅವರು 20,000 'ಸಮವಸ್ತ್ರಧಾರಿ' ಆರ್‌ಎಸ್‌ಎಸ್ ಸ್ವಯಂಸೇವಕರ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಮುಂಜಾನೆ ಮೋಹನ್ ಭಾಗವತ್ ಅವರು ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದರು. ಅವರ ಜೊತೆ ಆರ್‌ಎಸ್‌ಎಸ್‌ನ ಹಿರಿಯ ನಾಯಕರು ಇದ್ದರು.
ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಹಲವಾರು ಸಾಂಸ್ಥಿಕ ಸಭೆಗಳಲ್ಲಿ ಭಾಗವಹಿಸಲು ಮೋಹನ್ ಭಾಗವತ್ ಅವರು ತಮ್ಮ ನಾಲ್ಕು ದಿನಗಳ ವಾರ್ಷಿಕ ಭೇಟಿಯ ಭಾಗವಾಗಿ ಸೆಪ್ಟೆಂಬರ್ 15 ರಂದು ಕೇರಳವನ್ನು ತಲುಪಿದರು.
ಸೆಪ್ಟೆಂಬರ್ 16 ಮತ್ತು 17 ರಂದು ನಡೆದ ಹಲವಾರು ಸಂಘಟನಾ ಸಭೆಗಳಲ್ಲಿ ಭಾಗವಹಿಸಿ ತ್ರಿಶೂರ್‌ನಿಂದ ಶನಿವಾರ ರಾತ್ರಿ ಆರ್‌ಎಸ್‌ಎಸ್ ಮುಖ್ಯಸ್ಥರು ಗುರುವಾಯೂರಿಗೆ ತಲುಪಿದರು. ಅಲ್ಲಿ ಸಂಪೂರ್ಣ ಸಮವಸ್ತ್ರದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರ ಬೃಹತ್ ಸಮಾವೇಶ ‘ಸಾಂಘಿಕ್’ ಗಾಗಿ ಸಿದ್ಧತೆಗಳು ನಡೆಯುತ್ತಿವೆ.
ಸೆಪ್ಟೆಂಬರ್ 15 ರಂದು ಕೇರಳಕ್ಕೆ ಆಗಮಿಸಿದ ಕೂಡಲೇ ಆರ್‌ಎಸ್‌ಎಸ್ ಮುಖ್ಯಸ್ಥರು ಆಧ್ಯಾತ್ಮಿಕ ನಾಯಕಿ ಮಾತಾ ಅಮೃತಾನಂದಮಯಿ ದೇವಿ ಅವರನ್ನು ಕೊಲ್ಲಂನ ಕರುಂಗಪಲ್ಲಿ ಬಳಿಯ ವಲ್ಲಿಕಾವು ಅವರ ಆಶ್ರಮದಲ್ಲಿ ಭೇಟಿಯಾದರು. ಬಳಿಕ ಕೊಚ್ಚಿಯಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ತೆರಳಿ ರಾತ್ರಿ ತಂಗಿದ್ದರು.
ಸೆಪ್ಟೆಂಬರ್ 16 ರಂದು ಮೋಹನ್ ಭಾಗವತ್ ಅವರು ತಮ್ಮ ಸಂಘಟನೆಯ ಆಂತರಿಕ ಸಭೆಗಳಲ್ಲಿ ಭಾಗವಹಿಸಲು ತ್ರಿಶೂರ್‌ಗೆ ತೆರಳಿದರು.
ಶನಿವಾರ ರಾತ್ರಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿ ಮಾಡಿ ಅವರೊಂದಿಗೆ ಔತಣಕೂಟ ನಡೆಸಿದರು. ತ್ರಿಶೂರ್‌ನಲ್ಲಿರುವ ಸ್ಥಳೀಯ ಆರ್‌ಎಸ್‌ಎಸ್ ಮುಖಂಡರೊಬ್ಬರ ಮನೆಯಲ್ಲಿ ಈ ಸಭೆ ನಡೆದಿದೆ.
ಇಂದು ಸಂಜೆ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ನಂತರ ಮೋಹನ್ ಭಾಗವತ್ ಅವರು ಕೇರಳದಿಂದ ತೆರಳಲಿದ್ದಾರೆ.