ಚೆನ್ನೈ: ಚೆಂಗಲಪಟ್ಟುವಿನ ಚುನಂಬೆಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ (ಪಿಎಚ್‌ಸಿ) ನರ್ಸ್‌ಗಳು ಸೋಮವಾರ ವಿಡಿಯೋ ಕಾಲ್ ಮೂಲಕ ವೈದ್ಯರು ನೀಡಿದ ಸೂಚನೆಯಂತೆ ಹೆರಿಗೆ ಪ್ರಕ್ರಿಯೆ ನಡೆಸಿದ ನಂತರ 32 ವರ್ಷದ ಮಹಿಳೆಯೊಬ್ಬರು ಮೃತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
'ಮದುರಾಂತಕಂ ಬಳಿಯ ಚುನಂಬೆಡುವಿನ ನಿವಾಸಿಯಾದ ಪುಷ್ಪಾ (32) ಅವರಿಗೆ ಸೋಮವಾರ ಹೆರಿಗೆ ದಿನಾಂಕವನ್ನು ನೀಡಲಾಗಿತ್ತು. ಅವರು ಮತ್ತು ಅವರ ಪತಿ ಅಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪಿಎಚ್‌ಸಿಗೆ ಬಂದರು. ಆದರೆ, ಮಹಿಳೆಗೆ ನೋವು ಇಲ್ಲದ ಕಾರಣ, ಸ್ವಲ್ಪ ಸಮಯದ ನಂತರ ಹಿಂತಿರುಗಲು ದಾದಿಯರು ಸೂಚಿಸಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುನಃ ಸಂಜೆ 6 ಗಂಟೆಗೆ ದಂಪತಿ ಪಿಎಚ್‌ಸಿಗೆ ಹಿಂತಿರುಗಿದಾಗ ವೈದ್ಯರು ಇರಲಿಲ್ಲ. ಇದೇ ವೇಳೆ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ತೊಡಕುಗಳಿರುವುದನ್ನು ನರ್ಸ್ ಕಂಡುಕೊಂಡಿದ್ದಾರೆ. 'ಈ ವಿಚಾರವನ್ನು ದಾದಿಯರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ವಿಡಿಯೋ ಕರೆ ಮೂಲಕ ಕಾರ್ಯವಿಧಾನವನ್ನು ವಿವರಿಸಿದ್ದಾರೆ' ಎಂದು ಅಧಿಕಾರಿ ಹೇಳಿದರು.
ಇದು ಬ್ರೀಚ್ ಪ್ರೆಸೆಂಟೇಶನ್ (ತಲೆಯ ಬದಲಿಗೆ ಪಾದಗಳು ಹೊರಗೆ ಬರುವ ಹೆರಿಗೆ ಪ್ರಕ್ರಿಯೆ) ಆಗಿರುವುದರಿಂದ, ಮಹಿಳೆಯನ್ನು ಮಧುರಾಂತಕಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ವೈದ್ಯರು ದಾದಿಯರಿಗೆ ಸಲಹೆ ನೀಡಿದ್ದಾರೆ.
ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ಪುಷ್ಪಾ ಅವರಿಗೆ ಹೆರಿಗೆಯಾಗಿದ್ದು, ಮೃತ ಮಗುವಿಗೆ ಜನ್ಮ ನೀಡಿದ್ದರು ಮತ್ತು ರಕ್ತ ಸ್ರಾವದಿಂದಾಗಿ ಅಸ್ವಸ್ಥರಾಗಿದ್ದರು. ಸೋಮವಾರ ರಾತ್ರಿಯ ಹೊತ್ತಿಗೆ ಅವರ ಆರೋಗ್ಯ ಸ್ಥಿರವಾಗಿತ್ತು.
ಈ ಮಧ್ಯೆ, ಪಿಎಚ್‌ಸಿಯ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಟಿ.ಎಸ್. ಸೆಲ್ವವಿನಾಯಗಂ ತಿಳಿಸಿದ್ದಾರೆ.
Advertisement