ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದ ಸಹೋದ್ಯೋಗಿ

ವಿವಾಹವಾಗಲು ನಿರಾಕರಿಸಿದ ಕಾರಣ ಸಹೋದ್ಯೋಗಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ಇಲ್ಲಿನ ವ್ಯಕ್ತಿಯೊಬ್ಬನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಥಾಣೆ: ವಿವಾಹವಾಗಲು ನಿರಾಕರಿಸಿದ ಕಾರಣ ಸಹೋದ್ಯೋಗಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ಇಲ್ಲಿನ ವ್ಯಕ್ತಿಯೊಬ್ಬನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರೋಪಿ ಯೋಗೇಶ್ ಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದು, 27 ವರ್ಷದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆಯಾಗಿ ಕಳೆದ ಮೂರು ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯು ಕಲಾಂಬೋಲಿ ಪ್ರದೇಶದಲ್ಲಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತ ಇದಕ್ಕೂ ಮುನ್ನ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಮಹಿಳೆ ನಿರಾಕರಿಸಿದ್ದರು ಎಂದು ಶಿಲ್-ದೈಘರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಚಿನ್ ಗಾವ್ಡೆ ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಆತ ಆಕೆಯನ್ನು ಮೋಟಾರ್‌ ಬೈಕ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ಆಹ್ವಾನಿಸಿದನು ಮತ್ತು ಅವರು ಉತ್ತರಶಿವ್ ಪ್ರದೇಶಕ್ಕೆ ತೆರಳಿದರು. ದಾರಿಯಲ್ಲಿ ಮೋಟಾರ್ ಬೈಕನ್ನು ನಿಲ್ಲಿಸಿದ ಆತ ಮತ್ತೆ ತನ್ನನ್ನು ಮದುವೆಯಾಗುವಂತೆ ಕೇಳಿದಾಗ ಮಹಿಳೆ ತನಗೆ ಈಗಾಗಲೇ ಮದುವೆಯಾಗಿದೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಕುಮಾರ್, ಚಾಕುವಿನಿಂದ ಆಕೆಗೆ ಇರಿದು, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಟ್ಟೆ ಮತ್ತು ಮುಖದ ಮೇಲೆ ಗಾಯಗಳಿಂದ ಬಳಲುತ್ತಿದ್ದ ಮಹಿಳೆ, ಆಟೋ ರಿಕ್ಷಾವನ್ನು ಹತ್ತಿ ಕಲ್ವಾ ಸಿವಿಲ್ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com