'ದ್ವೇಷ ಅಪರಾಧ', 'ಭಾರತ ವಿರೋಧಿ ಚಟುವಟಿಕೆಗಳ' ಕುರಿತು ಜಾಗರೂಕರಾಗಿರಿ: ಕೆನಡಾದ ಭಾರತ ಪ್ರಜೆಗಳಿಗೆ ಕೇಂದ್ರ ಎಚ್ಚರಿಕೆ

'ದ್ವೇಷ ಅಪರಾಧಗಳು', 'ಭಾರತ ವಿರೋಧಿ ಚಟುವಟಿಕೆಗಳ' ಕುರಿತು ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಕೆನಡಾದಲ್ಲಿರುವ ಭಾರತ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 'ದ್ವೇಷ ಅಪರಾಧಗಳು', 'ಭಾರತ ವಿರೋಧಿ ಚಟುವಟಿಕೆಗಳ' ಕುರಿತು ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಕೆನಡಾದಲ್ಲಿರುವ ಭಾರತ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಕೆನಡಾದಲ್ಲಿರುವ ತನ್ನ ಪ್ರಜೆಗಳು ಮತ್ತು ಆ ದೇಶಕ್ಕೆ ಪ್ರಯಾಣಿಸುವವರು ಅಲ್ಲಿ "ದ್ವೇಷ ಅಪರಾಧಗಳು, ಮತೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತೀವ್ರ ಹೆಚ್ಚಳ ದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವಂತೆ ಭಾರತ ಸರ್ಕಾರ ಶುಕ್ರವಾರ ಸಲಹೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕುರಿತು ಸಲಹೆ ನೀಡಿದ್ದು, ಕೆನಡಾದ ಹೈಕಮಿಷನ್ / ಕಾನ್ಸುಲೇಟ್ ಜನರಲ್ ಅವರು ಕೆನಡಾದ ಅಧಿಕಾರಿಗಳೊಂದಿಗೆ ಈ ಘಟನೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಅಪರಾಧಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 'ಮೇಲೆ ವಿವರಿಸಿದಂತೆ ಅಪರಾಧಗಳ ಹೆಚ್ಚುತ್ತಿರುವ ಘಟನೆಗಳ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣ ಅಥವಾ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳುವವರು ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ" ಎಂದು ಸಚಿವಾಲಯ ಸಲಹೆಯಲ್ಲಿ ತಿಳಿಸಿದೆ. ಅಂತೆಯೇ ಯಾವುದೇ ಅವಶ್ಯಕತೆ ಅಥವಾ ತುರ್ತು ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಈ ನೋಂದಣಿಯು ಹೈ ಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಅನ್ನು ಸಕ್ರಿಯಗೊಳಿಸುತ್ತದೆ ಎಂದು ಅದು ಹೇಳಿದೆ.

ಕೆನಡಾದಲ್ಲಿ ಈ ಅಪರಾಧಗಳ ಅಪರಾಧಿಗಳನ್ನು ಇದುವರೆಗೆ ನ್ಯಾಯಾಂಗಕ್ಕೆ ತಂದು ತನಿಖೆ ನಡೆಸಿಲ್ಲ ಎಂದು ಎಂಇಎ ಅಸಮಾಧಾನ ವ್ಯಕ್ತಪಡಿಸಿದೆ. ಅಂತೆಯೇ ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದ ವಿದ್ಯಾರ್ಥಿಗಳು ತಮ್ಮ ವೆಬ್‌ಸೈಟ್‌ಗಳು ಅಥವಾ MADAD ಪೋರ್ಟಲ್ madad.gov.in ಮೂಲಕ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಸಚಿವಾಲಯ ತಿಳಿಸಿದೆ.

ಹಗುರವಾಗಿ ತೆಗೆದುಕೊಳ್ಳಲ್ಲ
ಜಾಗತಿಕವಾಗಿ ಭಾರತಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ನಿರ್ಲಕ್ಷಿಸದಿರಲು ಮತ್ತು ಭಾರತ ವಿರೋಧಿ ಕೃತ್ಯಗಳು ಎಲ್ಲೇ ನಡೆದರೂ ಅದಕ್ಕೆ ತೀಕ್ಷ್ಣ ಪ್ರತಿಯಿಸಲು ಸರಕಾರ ನಿರ್ಧರಿಸಿದೆ. ಲೀಸೆಸ್ಟರ್ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಘಟನೆಯನ್ನು ಭಾರತ ಬಲವಾಗಿ ಪ್ರತಿಭಟಿಸಿದೆ. ಬ್ರಿಟನ್ ಅಧಿಕಾರಿಗಳ ಬಳಿ ಅದು ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ್ ಉಗ್ರರು ಬ್ರಿಟನ್‌ನಲ್ಲಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದರೂ ಅಲ್ಲಿನ ಸರಕಾರ ಕಣ್ಮುಚ್ಚಿ ಕೂತಿರುವುದು ಭಾರತಕ್ಕೆ ಇರಿಸು ಮುರುಸು ತಂದಿದೆ. ಭಾರತದ ಹಿತಾಸಕ್ತಿ ಇರುವ ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದಲ್ಲಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಧ್ಯಪ್ರವೇಶಿಸಲು ಬ್ರಿಟನ್ ಪ್ರಯತ್ನಿಸುತ್ತಿರುವುದೂ ಭಾರತಕ್ಕೆ ಅಸಮಾಧಾನ ತಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬ್ರಿಟನ್ ಮತ್ತು ಕೆನಡಾದಲ್ಲಿನ ಬೆಳವಣಿಗೆಯನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com