ಉತ್ತರಪ್ರದೇಶ: ಆಸ್ಪತ್ರೆಯಲ್ಲಿ ಮಹಿಳೆಯ ನಮಾಜ್‌ನ ವೈರಲ್ ವೀಡಿಯೊ; ಅಪರಾಧವಲ್ಲ ಎಂದ ಪೊಲೀಸರು!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸರ್ಕಾರಿ ಆಸ್ಪತ್ರೆಯ ವಾರ್ಡ್‌ನ ಹೊರಗೆ ರೋಗಿಯ ಸಂಬಂಧಿ ನಮಾಜ್ ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ, ಪ್ರಕರಣದಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದು ಪೊಲೀಸರು ಇಂದು ಹೇಳಿದ್ದಾರೆ.
ನಮಾಜ್ ಮಾಡುತ್ತಿರುವ ಮಹಿಳೆ
ನಮಾಜ್ ಮಾಡುತ್ತಿರುವ ಮಹಿಳೆ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸರ್ಕಾರಿ ಆಸ್ಪತ್ರೆಯ ವಾರ್ಡ್‌ನ ಹೊರಗೆ ರೋಗಿಯ ಸಂಬಂಧಿ ನಮಾಜ್ ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ, ಪ್ರಕರಣದಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದು ಪೊಲೀಸರು ಇಂದು ಹೇಳಿದ್ದಾರೆ. ಆದಾಗ್ಯೂ, ಆಸ್ಪತ್ರೆಯ ಅಧಿಕಾರಿಗಳು, ಮಹಿಳೆ ಮತ್ತು ಸಿಬ್ಬಂದಿಗೆ ಇಂತಹ ಚಟುವಟಿಕೆಯ ವಿರುದ್ಧ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಕಾನೂನುಬಾಹಿರ ಎಂಬ ಕಾಮೆಂಟ್‌ನೊಂದಿಗೆ ವೀಡಿಯೊ ವಾಟ್ಸಾಪ್ ಗುಂಪುಗಳು ಮತ್ತು ಇತರ ವೇದಿಕೆಗಳಲ್ಲಿ ವೈರಲ್ ಆಗಿದೆ. ಆದರೆ ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕಾಗಿ ಯಾರಾದರೂ ಪ್ರಾರ್ಥಿಸಿದರೆ ತಪ್ಪೇನು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಕೇಳಿದ್ದಾರೆ.

ಈ ಬಗ್ಗ ತನಿಖೆ ನಡೆಯುತ್ತಿದೆ ಎಂದು ಪ್ರಯಾಗರಾಜ್ ಪೊಲೀಸರು ಆರಂಭದಲ್ಲಿ ಹೇಳಿದ್ದರು. ಇದೀಗ ಪೊಲೀಸರು ತನಿಖೆ ನಡೆಸಿ ಟ್ವೀಟ್ ಮಾಡಿದ್ದು, ವಿಡಿಯೋದಲ್ಲಿರುವ ಮಹಿಳೆ ಯಾವುದೇ ತಪ್ಪು ಉದ್ದೇಶವಿಲ್ಲದೆ ಮತ್ತು ಯಾವುದೇ ಕೆಲಸ ಅಥವಾ ಸಂಚಾರಕ್ಕೆ ಅಡ್ಡಿಯಾಗದಂತೆ ರೋಗಿಯ ಶೀಘ್ರ ಚೇತರಿಸಿಕೊಳ್ಳಲು ನಮಾಜ್ ಮಾಡುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. ಅಪರಾಧದ ಯಾವುದೇ ವರ್ಗಕ್ಕೆ ಈ ಕ್ರಮ ಸೇರುವುದಿಲ್ಲ. ಕೆಲವು ಸುದ್ದಿಗಳು ತಪ್ಪಾಗಿ ವರದಿ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ ಎಂದರು.

ಇದಕ್ಕೂ ಮುನ್ನ ತೇಜ್ ಬಹದ್ದೂರ್ ಸಪ್ರು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಕೆ.ಅಖೌರಿ ಮಾತನಾಡಿ  ವಾರ್ಡ್‌ನಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದೇವೆ . ಅವರು ಮಹಿಳೆಯನ್ನು ಡೆಂಗ್ಯೂ ವಾರ್ಡ್‌ನಲ್ಲಿ ರೋಗಿಯ ಅಟೆಂಡರ್ ಎಂದು ಗುರುತಿಸಿದ್ದಾರೆ. ಇಂತಹ ಕೃತ್ಯಕ್ಕೆ ಅವಕಾಶ ನೀಡದಂತೆ ನಾವು ಎಲ್ಲಾ ವಾರ್ಡ್‌ಗಳ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದೇವೆ. ಇನ್ನು ಮುಂದೆ ಹೀಗೆ ಮಾಡದಂತೆ ಮಹಿಳೆಗೆ ತಿಳಿಸಿದ್ದೇವೆ. ನಮ್ಮ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಒಂದೆರಡು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಇಂತಹ ಮತ್ತೊಂದು ವಿವಾದದಲ್ಲಿ, ಹಿಂದೂ ಬಲಪಂಥೀಯ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿದ್ದವು. ಲಖನೌದ ಮಾಲ್‌ನಲ್ಲಿ ಪುರುಷರ ಗುಂಪೊಂದು ನಮಾಜ್ ಮಾಡುವುದನ್ನು ಚಿತ್ರೀಕರಿಸಲಾಗಿತ್ತು. ಪ್ರಕರಣದಲ್ಲಿ ಪ್ರಾರ್ಥನೆ ಸಲ್ಲಿಸಿದವರನ್ನು ನಂತರ ಬಂಧಿಸಲಾಯಿತು ನಂತರ ಅವರು ಜಾಮೀನು ಪಡೆದರು.

ನೆರೆಯ ಮಧ್ಯಪ್ರದೇಶದಲ್ಲಿ, ಭೋಪಾಲ್‌ನ ಮಾಲ್‌ನಲ್ಲಿ ಕೆಲವು ಉದ್ಯೋಗಿಗಳು ಮಾಲ್‌ನ ಮೂಲೆಯಲ್ಲಿ ಪ್ರಾರ್ಥನೆ ಮಾಡುವುದನ್ನು ದಾಖಲಿಸಿದ ನಂತರ ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಗೆ ಸಾಕ್ಷಿಯಾಯಿತು. ಎರಡೂ ಮಾಲ್‌ಗಳು ನಂತರ ತಮ್ಮ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಯನ್ನು ನಿಷೇಧಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com