ಒಡಿಶಾ: ರಸ್ತೆಯಲ್ಲೇ ಶಿಶುವಿಗೆ ಜನ್ಮ ನೀಡಿ ನವಜಾತ ಮಗುವಿನೊಂದಿಗೆ 2 ಕಿಲೋ ಮೀಟರ್ ನಡೆದ ಮಹಿಳೆ

ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಸ್ತೆ ಪಕ್ಕೆ ಹೆರಿಗೆಯಾಗಿ, ನವಜಾತ ಶಿಶುವಿನೊಂದಿಗೆ ಆಂಬುಲೆನ್ಸ್‌ಗೆ ತೆರಳಲು 2 ಕಿಲೋ ಮೀಟರ್  ದೂರ ನಡೆದುಕೊಂಡು ಹೋದ ಹೃದಯವಿದ್ರಾವಕ ಘಟನೆ ಬುಧವಾರ ತಡರಾತ್ರಿ ಕೊರಾಪುಟ್‌ನ ದಸ್ಮಂತ್‌ಪುರ ಬ್ಲಾಕ್‌ನಲ್ಲಿ ನಡೆದಿದೆ.
ಮಗುವಿಗೆ ಜನ್ಮನೀಡಿದ ಮಹಿಳೆ ನಡೆದುಕೊಂಡು ಹೋಗುತ್ತಿರುವುದು
ಮಗುವಿಗೆ ಜನ್ಮನೀಡಿದ ಮಹಿಳೆ ನಡೆದುಕೊಂಡು ಹೋಗುತ್ತಿರುವುದು

ಜೈಪುರ: ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಸ್ತೆ ಪಕ್ಕೆ ಹೆರಿಗೆಯಾಗಿ, ನವಜಾತ ಶಿಶುವಿನೊಂದಿಗೆ ಆಂಬುಲೆನ್ಸ್‌ಗೆ ತೆರಳಲು 2 ಕಿಲೋ ಮೀಟರ್  ದೂರ ನಡೆದುಕೊಂಡು ಹೋದ ಹೃದಯವಿದ್ರಾವಕ ಘಟನೆ ಬುಧವಾರ ತಡರಾತ್ರಿ ಕೊರಾಪುಟ್‌ನ ದಸ್ಮಂತ್‌ಪುರ ಬ್ಲಾಕ್‌ನಲ್ಲಿ ನಡೆದಿದೆ.

ಮಹಿಳೆಯನ್ನು ದಸ್ಮಂತಪುರ ಬ್ಲಾಕ್‌ನ ತುಂಖಾಲ್ ಗ್ರಾಮದ 28 ವರ್ಷದ ಸ್ವಾತಿ ಮುದುಲಿ ಎಂದು ಗುರುತಿಸಲಾಗಿದೆ. ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಸ್ವಾತಿ ಅವರ ಕುಟುಂಬಸ್ಥರು ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದ್ದಾರೆ. ಗರ್ಭಿಣಿ ಮಹಿಳೆಯನ್ನು ದಸ್ಮಂತ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲು ಆರೋಗ್ಯ ಕಾರ್ಯಕರ್ತರು ಜನನಿ ಎಕ್ಸ್‌ಪ್ರೆಸ್ ಆಂಬ್ಯುಲೆನ್ಸ್ ಸೇವೆಯನ್ನು ತಕ್ಷಣವೇ ಕರೆದರು.

ಮಾರ್ಗಮಧ್ಯೆ ಧರ್ಮಗಡ ಗ್ರಾಮದ ಬಳಿ ಆಂಬುಲೆನ್ಸ್ ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಡಾಂಬರು ರಸ್ತೆ ಸರಿಯಾಗಿಲ್ಲದ ಕಾರಣ ವಾಹನ ಮುಂದೆ ಸಾಗಲು ಸಾಧ್ಯವಾಗದ ಕಾರಣ ಆಂಬ್ಯುಲೆನ್ಸ್ ಸಿಬ್ಬಂದಿ ಸ್ವಾತಿಯನ್ನು ಅವರು ಸಿಲುಕಿರುವ ಸ್ಥಳಕ್ಕೆ ಕರೆತರುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.

ಅದರಂತೆ ಸ್ವಾತಿ, ಆಕೆಯ ಕುಟುಂಬ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ಆಂಬ್ಯುಲೆನ್ಸ್‌ಗೆ ತೆರಳಲು ಧರ್ಮಗಡ ಗ್ರಾಮದತ್ತ ಹೆಜ್ಜೆ ಹಾಕಿದರು. ದಾರಿ ಮಧ್ಯೆ ಗರ್ಭಿಣಿ ಮಹಿಳೆ ನೋವು ತಾಳಲಾರದೆ ರಸ್ತೆಬದಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲಿ ಸ್ವಲ್ಪ ಸಮಯ ಕಾದ ನಂತರ ಸ್ವಾತಿ ಆಂಬುಲೆನ್ಸ್ ತಲುಪಲು ಸೆಲ್‌ಫೋನ್ ಟಾರ್ಚ್ ಬೆಳಕಿನಲ್ಲಿ ನವಜಾತ ಶಿಶುವಿನೊಂದಿಗೆ ಸುಮಾರು 2 ಕಿಮೀ ಮತ್ತೆ ನಡೆಯಬೇಕಾಯಿತು.

ಆಂಬ್ಯುಲೆನ್ಸ್ ತಲುಪಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಸ್ಮಂತ್‌ಪುರ ಪ್ರಾಥಮಿಕ ಕೇಂದ್ರಗಳಿಗೆ ರವಾನಿಸಲಾಯಿತು. ತಾಯಿ ಮತ್ತು ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ತುಂಖಾಲ್ ಗ್ರಾಮವು ದಸ್ಮಂತ್‌ಪುರದಿಂದ ಕೇವಲ 12 ಕಿಮೀ ದೂರದಲ್ಲಿದ್ದರೂ, ಬ್ಲಾಕ್ ಕೇಂದ್ರ ಕಚೇರಿಗೆ ನೇರ ಮಾರ್ಗವಿಲ್ಲ. 12 ಕಿಮೀ ರಸ್ತೆಯಲ್ಲಿ ಆರು ಕಿಮೀ ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದು, ಉಳಿದ ಭಾಗ ಡಾಂಬರು ಹಾಕಿಲ್ಲ. ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ 6 ಕಿ.ಮೀ ವ್ಯಾಪ್ತಿಯು ಕೆಸರು ಮತ್ತು ಗುಂಡಿಗಳಿಂದ ತುಂಬಿದೆ. ಶೇಕಡಾ 60 ರಷ್ಟು ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿವೆ ಅಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ. ದಸ್ಮಂತಪುರವು 121 ಗ್ರಾಮಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com