ಹರಿಯಾಣ: ರೈತರ ಬೇಡಿಕೆ ಈಡೇರಿಸಿದ ನಂತರ 20 ಗಂಟೆಗಳ ಹೆದ್ದಾರಿ ತಡೆ ಅಂತ್ಯ

ಶೀಘ್ರ ಭತ್ತ ಖರೀದಿಗೆ ಆಗ್ರಹಿಸಿ 20 ಗಂಟೆಗೂ ಹೆಚ್ಚು ಕಾಲ ಪ್ರಮುಖ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದ ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ, ಅವರ ಬೇಡಿಕೆ ಈಡೇರಿಸಿದೆ. ನಂತರ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ.
ರೈತರಿಂದ ಹೆದ್ದಾರಿ ತಡೆ
ರೈತರಿಂದ ಹೆದ್ದಾರಿ ತಡೆ

ಚಂಡೀಗಢ: ಶೀಘ್ರ ಭತ್ತ ಖರೀದಿಗೆ ಆಗ್ರಹಿಸಿ 20 ಗಂಟೆಗೂ ಹೆಚ್ಚು ಕಾಲ ಪ್ರಮುಖ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದ ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ, ಅವರ ಬೇಡಿಕೆ ಈಡೇರಿಸಿದೆ. ನಂತರ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ. ಪ್ರತಿಭಟನೆಯಿಂದಾಗಿ ಕುರುಕ್ಷೇತ್ರದ ಸುತ್ತಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಹರಿಯಾಣದಲ್ಲಿ ಭತ್ತ ಸೇರಿದಂತೆ ಖಾರಿಫ್ ಬೆಳೆಗಳ ಖರೀದಿ ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿದೆ.

ರಾಜ್ಯ ಸರ್ಕಾರ ಹಿಂದಿನ ಎಕರೆಗೆ 22 ಕ್ವಿಂಟಾಲ್ ಬದಲಿಗೆ ಎಕರೆಗೆ 30 ಕ್ವಿಂಟಾಲ್ ಭತ್ತವನ್ನು ಖರೀದಿಸಲು ಒಪ್ಪಿಕೊಂಡ ನಂತರ ಹೆದ್ದಾರಿ ತಡೆ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹರ್ಯಾಣ ಬಿಕೆಯು(ಚದುನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಅವರು ಹೇಳಿದ್ದಾರೆ.

ಧಾನ್ಯ ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ಭತ್ತವನ್ನು ಸಾಗಿಸಲು ಪ್ರಾರಂಭಿಸುವುದಾಗಿ ರಾಜ್ಯ ಸರ್ಕಾರ ಈಗ ಹೇಳಿದೆ. ಮೊದಲು ಘೋಷಿಸಿದಂತೆ ಅಕ್ಟೋಬರ್ 1 ರಂದು ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಬೆಳೆ ಹೆಚ್ಚು ಇಳುವರಿ ಪಡೆಯುವ ಐದು ಜಿಲ್ಲೆಗಳಲ್ಲಿ ಖರೀದಿಯ ಮಿತಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. 

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾದ ಕಾರಣಕ್ಕಾಗಿ ನ್ಯಾಯಾಲಯದಿಂದ ಟೀಕೆಗೊಳಗಾದ ನಂತರ ಹರಿಯಾಣ ಸರ್ಕಾರವು ತುರ್ತು ಕ್ರಮ ಕೈಗೊಂಡಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದೆ ಹೆದ್ದಾರಿಯನ್ನು ಮುಕ್ತವಾಗಿಡಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು.

ಮಧ್ಯರಾತ್ರಿಯ ವಿಚಾರಣೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪರಿಸ್ಥಿತಿಯನ್ನು ತಡೆಯಲು ಜಿಲ್ಲಾಡಳಿತ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿತ್ತು. ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡದಂತೆ ತಡೆಯಲು ರಾಜ್ಯಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯವು, ಆಡಳಿತಕ್ಕೆ ಬೇರೆ ಮಾರ್ಗವಿಲ್ಲದಿದ್ದರೆ ಬಲ ಪ್ರಯೋಗ ಮಾಡುವುದು ಕೊನೆಯ ಆಯ್ಕೆಯಾಗಿರಬೇಕು ಎಂದು ಸೂಚಿಸಿತ್ತು.

ಎಲ್ಲಾ ಬದಲಿ ಮಾರ್ಗಗಳನ್ನು ತೆಗೆದುಹಾಕಲಾಗಿದೆ ಮತ್ತು ಈಗ ಸಂಚಾರ ಆರಂಭಿಸಲಾಗಿದೆ ಎಂದು ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆ. ಸಮಸ್ಯೆಯನ್ನು ರೈತರೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಆರ್ದ್ರತೆ ಮತ್ತು ಮಳೆಯಿಂದಾಗಿ ಧಾನ್ಯಗಳು ಹಾಳಾಗುತ್ತವೆ ಎಂದು ಪ್ರತಿಭಟನಾ ನಿರತ ರೈತರು ಆತಂಕ ವ್ಯಕ್ತಪಡಿಸಿ ಶೀಘ್ರವೇ ಬೆಳೆ ಖರೀದಿಗೆ ಒತ್ತಾಯಿಸಿ ತಡರಾತ್ರಿವರೆಗೂ ಪ್ರತಿಭಟಿಸಿದ್ದರು. ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಬಳಿ ರೈತರು ತಮ್ಮ ಕಟಾವು ಮಾಡಿದ ಉತ್ಪನ್ನವನ್ನು ಖರೀದಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಹೆದ್ದಾರಿ ತಡೆದಿದ್ದರು. ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಜಾಗವಿಲ್ಲ ಎಂದು ಉಲ್ಲೇಖಿಸಿ ಖರೀದಿಯ ದಿನಾಂಕವನ್ನು ಮುಂಚಿತವಾಗಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com