ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್: ಫೋಟೋ ವೈರಲ್; ಸೂಪರ್ ಸಿಎಂ ಎಂದು ವಿರೋಧಪಕ್ಷಗಳ ಲೇವಡಿ!

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಹಾಗೂ ಲೋಕಸಭಾ ಸದಸ್ಯ ಶ್ರೀಕಾಂತ್ ಶಿಂಧೆ ಸಿಎಂ ಕುರ್ಚಿಯಲ್ಲಿ ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಎಂ ಕುರ್ಚಿಯಲ್ಲಿ ಏಕನಾಥ್ ಶಿಂಧೆ ಪುತ್ರ
ಸಿಎಂ ಕುರ್ಚಿಯಲ್ಲಿ ಏಕನಾಥ್ ಶಿಂಧೆ ಪುತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಹಾಗೂ ಲೋಕಸಭಾ ಸದಸ್ಯ ಶ್ರೀಕಾಂತ್ ಶಿಂಧೆ ಸಿಎಂ ಕುರ್ಚಿಯಲ್ಲಿ ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏಕನಾಥ ಶಿಂಧೆ ಪುತ್ರ ಶ್ರೀಕಾಂತ್‌ ಶಿಂಧೆ ಅವರು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ಬಗೆಗಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನು ಉದ್ಧವ್‌ ಠಾಕ್ರೆ ಬಣ ಟೀಕಾಸ್ತ್ರವಾಗಿ ಬಳಸಿಕೊಂಡಿದೆ.

ಇದು ನಮ್ಮ ಮನೆಯಲ್ಲಿ ತೆಗೆದ ಚಿತ್ರ, ತಂದೆಗೆ ಕಚೇರಿಯಲ್ಲಿ ನೀಡಿದ ಅಧಿಕೃತ ಸಿಎಂ ಕುರ್ಚಿ ಮೇಲೆ ನಾನು ಕುಳಿತಿಲ್ಲ ಎಂದು ಶ್ರೀಕಾಂತ್ ಸಮುಜಾಯಿಷಿ ನೀಡಿದ್ದಾರೆ. ಇದು ಮುಖ್ಯಮಂತ್ರಿಯ ಅಧಿಕೃತ ನಿವಾಸವೂ ಅಲ್ಲ. "ಥಾಣೆಯಲ್ಲಿರುವ ಖಾಸಗಿ ನಿವಾಸ ಹಾಗೂ ಕಚೇರಿ ಇದು" ಎಂದು ಸ್ಪಷ್ಟನೆ ನೀಡಿದ್ದಾರೆ. ವಿರೋಧ ಪಕ್ಷಗಳು ನನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿವೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ತಾವು ಎರಡು ಅವಧಿಯ ಸಂಸದರಾಗಿದ್ದು, ಶಿಷ್ಟಾಚಾರದ ಬಗ್ಗೆ ಅರಿವಿದೆ ಎಂದಿರುವ ಶ್ರೀಕಾಂತ್. "ಇಂದು, ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಸ್ಥಳ, ಇದಕ್ಕಾಗಿ 'ಮಹಾರಾಷ್ಟ್ರ ಸರ್ಕಾರ'  ಎಂದು ಬೋರ್ಡ್  ಕುರ್ಚಿಯ ಹಿಂದೆ ಇರಿಸಲಾಗಿತ್ತು, ಆದರೆ ಅದು ನನಗೆ ತಿಳಿದಿರಲಿಲ್ಲ. ಯಾರೋ ಕಿಡಿಗೇಡಿಗಳು ರಹಸ್ಯವಾಗಿ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ’ ಎಂದು ಸಿಎಂ ಪುತ್ರ ಸಮಾಜಾಯಿಷಿ ನೀಡಿದ್ದಾರೆ. ಚಿತ್ರದಲ್ಲಿ, ಕಲ್ಯಾಣ್‌ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂಧೆ ಅವರು "ಮಹಾರಾಷ್ಟ್ರ ಸರ್ಕಾರ-ಮುಖ್ಯಮಂತ್ರಿ" ಎಂದು ಬರೆದಿರುವ ಬೋರ್ಡ್‌ನೊಂದಿಗೆ ಕುರ್ಚಿಯಲ್ಲಿ ಕುಳಿತಿದ್ದಾರೆ.

ಎನ್‍ಸಿಪಿ ವಕ್ತಾರ ರವಿಕಾಂತ್ ವಾರ್ಪೆ ಟ್ವೀಟ್ ಮಾಡಿದ ಚಿತ್ರದಲ್ಲಿ ಶ್ರೀಕಾಂತ್ ಅವರು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಫೋಟೊದ ಮುಂದೆ ಕುಳಿತಿದ್ದಾರೆ. ಫೋಟೊ ಹಿಂಭಾಗದಲ್ಲಿ "ಮಹಾರಾಷ್ಟ್ರ ಸರ್ಕಾರ- ಮುಖ್ಯಮಂತ್ರಿ" ಎಂಬ ಫಲಕ ಕಾಣುತ್ತಿದೆ. ಶ್ರೀಕಾಂತ್ ಶಿಂಧೆಯವರನ್ನು ಸೂಪರ್ ಸಿಎಂ ಎಂದು ಕರೆದಿರುವ ಎನ್‍ಸಿಪಿ ನಾಯಕ, "ಇದು ಯಾವ ಬಗೆಯ ರಾಜಧರ್ಮ?" ಎಂದು ಪ್ರಶ್ನಿಸಿದ್ದಾರೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಟ್ವೀಟ್ ಮಾಡಿ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಗ್ಗೆ ಅನುಕಂಪವಿದೆ ಎಂದು ವ್ಯಂಗ್ಯವಾಡಿದ್ದಾರೆ. ಆದಿತ್ಯ ಠಾಕ್ರೆ ಸಚಿವರಾಗಿದ್ದಾಗ ಅವರು ಸಿಎಂ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾರೆ ಎನ್ನುವುದು ಬಿಜೆಪಿಯ ಆರೋಪವಾಗಿತ್ತು. ಆದರೆ ಏಕನಾಥ ಶಿಂಧೆಯವರ ಪುತ್ರ ಸಚಿವರೂ ಅಲ್ಲ; ಶಾಸಕರೂ ಅಲ್ಲ" ಎಂದು ಕಾಲೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com