ಗಂಗಾಜಲ ಪ್ರಮಾಣ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಹೊಸ ರಾಜಕೀಯ ಗದ್ದಲ

ಭಗವಾನ್ ರಾಮ ಅಥವಾ ಕೃಷ್ಣ ಯಾರಿಗೆ ಸೇರಿದವರು ಎಂಬುದರ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ನಿರಂತರ ಜಗಳದ ನಡುವೆ, 2018ರ ಚುನಾವಣಾ ಭರವಸೆಗಳ ಸಂದರ್ಭದಲ್ಲಿನ 'ಗಂಗಾ ಜಲ ಪ್ರಮಾಣ' ವಿಚಾರವಾಗಿ ಇದೀಗ ಎರಡು ಪಕ್ಷಗಳು ತೊಡಗಿಸಿಕೊಂಡಿದ್ದು, ಹೊಸ ರಾಜಕೀಯ ವಿವಾದ ಹೊರಹೊಮ್ಮಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ರಾಯ್ಪುರ: ಭಗವಾನ್ ರಾಮ ಅಥವಾ ಕೃಷ್ಣ ಯಾರಿಗೆ ಸೇರಿದವರು ಎಂಬುದರ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ನಿರಂತರ ಜಗಳದ ನಡುವೆ, 2018ರ ಚುನಾವಣಾ ಭರವಸೆಗಳ ಸಂದರ್ಭದಲ್ಲಿನ 'ಗಂಗಾ ಜಲ ಪ್ರಮಾಣ' ವಿಚಾರವಾಗಿ ಇದೀಗ ಎರಡು ಪಕ್ಷಗಳು ತೊಡಗಿಸಿಕೊಂಡಿದ್ದು, ಹೊಸ ರಾಜಕೀಯ ವಿವಾದ ಹೊರಹೊಮ್ಮಿದೆ.

ಹಿಂದಿನ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತಾನು ನೀಡಿದ್ದ 36 ಭರವಸೆಗಳನ್ನು ಈಡೇರಿಸುವುದಾಗಿ ಪವಿತ್ರ ಗಂಗಾ ಜಲದೊಂದಿಗೆ ಪ್ರಮಾಣ ಮಾಡಿದ್ದರೂ, ಅವುಗಳನ್ನು ಈಡೇರಿಸಲು ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಪವಿತ್ರ ‘ಗಂಗಾಜಲ’ದ ಗೌರವಾರ್ಥ ‘ಕಲಶ ಯಾತ್ರೆ’ಯನ್ನು ಆರಂಭಿಸಿದೆ.

'ಕಾಂಗ್ರೆಸ್ ಪಕ್ಷ 36 ಭರವಸೆಗಳನ್ನು ಈಡೇರಿಸುವುದಾಗಿ ಗಂಗಾಜಲದ ಮೇಲೆ ಪ್ರಮಾಣ ವಚನ ಸ್ವೀಕರಿಸಿದೆ. ಆದರೆ, ಅದನ್ನು ಪಾಲಿಸಲಿಲ್ಲ. ಪ್ರಮಾಣ ವಚನ ಸ್ವೀಕಾರದ ನಂತರ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಗಂಗಾಜಲಕ್ಕೆ ಕಳಂಕ ತಂದಂತೆ' ಎಂದು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ‘ಗಂಗಾಜಲ್ ಕೆ ಸಮ್ಮಾನ್ ಮೆ ಬಿಜೆಪಿ ಮೈದಾನ್ ಮಿ’ (ಗಂಗಾಜಲದ ಗೌರವಾರ್ಥವಾಗಿ ಬಿಜೆಪಿ ನಿಂತಿದೆ) ಎಂಬ ಅಭಿಯಾನ ಆರಂಭಿಸಿದೆ. ಮದ್ಯ ನಿಶೇಷ ಮತ್ತು ನಿರುದ್ಯೋಗದ ವಿಚಾರವಾಗಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ.

ಬಿಜೆಪಿಯ ಆರೋಪಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯು ಗಂಗಾಜಲದ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದೆ ಮತ್ತು ಕೆಟ್ಟ ರಾಜಕೀಯ ಮಾಡುತ್ತಿದೆ ಎಂದಿದೆ.

'ಕಾಂಗ್ರೆಸ್ ಪಕ್ಷವು ಗಂಗಾಜಲದ ಮೇಲೆ ಪ್ರತಿಜ್ಞೆ ಮಾಡಿದ್ದು ಕೃಷಿ ಸಾಲವನ್ನು ಮನ್ನಾ ಮಾಡಲು ಮಾತ್ರವೇ ಹೊರತು ಇತರ ಭರವಸೆಗಳಿಗಾಗಿ ಅಲ್ಲ. ಆದರೆ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಭೂಪೇಶ್ ಬಘೇಲ್ ಸರ್ಕಾರವು ಅವುಗಳಲ್ಲಿ 90 ಪ್ರತಿಶತವನ್ನು ಪೂರೈಸಿರುವುದರಿಂದ, ಬಿಜೆಪಿ ಹತಾಶವಾಗಿದೆ' ಎಂದು ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದಾರೆ.

'ಬಿಜೆಪಿಯವರು ಗಂಗಾಜಲವನ್ನು ಕೈಗೆತ್ತಿಕೊಂಡು ಆಡಳಿತ ಪಕ್ಷದವರ ವಿರುದ್ಧ ನಾವು ಹೇಳುತ್ತಿರುವುದು ಸತ್ಯ ಎಂದು ಪ್ರತಿಜ್ಞೆ ಮಾಡಲಿ, ಇಲ್ಲವಾದರೆ ಪುರಾವೆ ತೋರಿಸಲಿ' ಎಂದು ಕಾಂಗ್ರೆಸ್ ನಾಯಕರು ಸವಾಲು ಹಾಕಿದರು.

'ಬಿಜೆಪಿ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಆಶ್ರಯಿಸುತ್ತದೆ. ತಮ್ಮ ಪ್ರಚಾರದ ಹಿಂದೆ ಸುಳ್ಳನ್ನು ಇಟ್ಟುಕೊಂಡಿರುವ ಕೇಸರಿ ಪಕ್ಷದ ನಾಯಕರು ಗಂಗಾಜಲಕ್ಕೆ ಗೌರವವನ್ನು ತರುತ್ತಿಲ್ಲ, ಬದಲಿಗೆ ಅವಹೇಳನ ಮಾಡುತ್ತಿದ್ದಾರೆ. ಅವರು ಇನ್ಮುಂದೆ ತಮ್ಮ ಸುಳ್ಳಿನ ಮೂಲಕ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ. ಸಿಂಗ್ ಪ್ರತಿಪಾದಿಸಿದ್ದಾರೆ.

2023 ರಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎರಡೂ ಪಕ್ಷಗಳು ಧಾರ್ಮಿಕ ವಿಚಾರಗಳನ್ನೊಳಗೊಂಡ ರಾಜಕೀಯದ ಮೇಲೆ ಏಕಪಕ್ಷೀಯತೆ ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ರಾಜಕೀಯ ವಿಮರ್ಶಕರು ಹೇಳಿದ್ದಾರೆ.

'ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ತನ್ನ ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿಗೆ ಇದರಿಂದ ಲಾಭವಾಗದಂತೆ ನೋಡಿಕೊಳ್ಳುತ್ತಿದೆ' ಎಂದು ರಾಜಕೀಯ ವೀಕ್ಷಕ ಅಶೋಕ್ ತೋಮರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com