ನಮ್ಮದು ಸೌಹಾರ್ದ ಸ್ಪರ್ಧೆ, ಪ್ರತಿಸ್ಪರ್ಧಿಗಳ ನಡುವಿನ ಕದನ ಅಲ್ಲ: ದಿಗ್ವಿಜಯ ಸಿಂಗ್ ಭೇಟಿ ಬಳಿಕ ಶಶಿ ತರೂರ್

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಲಿರುವ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರು, ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್‌ ಅವರನ್ನು ಭೇಟಿ ಮಾಡಿದ್ದಾರೆ.
ಶಶಿ ತರೂರ್ - ದಿಗ್ವಿಜಯ ಸಿಂಗ್
ಶಶಿ ತರೂರ್ - ದಿಗ್ವಿಜಯ ಸಿಂಗ್

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಲಿರುವ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರು, ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್‌ ಅವರನ್ನು ಭೇಟಿ ಮಾಡಿದ್ದಾರೆ.

ಸಿಂಗ್ ಭೇಟಿ ಬಳಿಕ ಮಾತನಾಡಿದ ಶಶಿ ತರೂರ್ ಅವರು, ತಮ್ಮದು ಪ್ರತಿಸ್ಪರ್ಧಿಗಳ ನಡುವಿನ ಕದನವಲ್ಲ. ಬದಲಾಗಿ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ಹೇಳಿದ್ದಾರೆ.

ಇಂದು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಂಗ್ರಹಿಸಿದ ನಂತರ  ದಿಗ್ವಿಜಯ್ ಸಿಂಗ್ ಅವರು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಭೇಟಿಯಾದರು.

"ಇಂದು ಮಧ್ಯಾಹ್ನ ದಿಗ್ವಿಜಯ ಸಿಂಗ್ ಅವರ ಭೇಟಿ ಮಾಡಿದೆ. ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ" ಎಂದು ತರೂರ್ ಟ್ವೀಟ್‌ ಮಾಡಿದ್ದಾರೆ.

ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಕದನವಲ್ಲ, ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ನಾವಿಬ್ಬರೂ ಒಪ್ಪಿಕೊಂಡೆದ್ದೇವೆ. ನಾವಿಬ್ಬರೂ ಬಯಸುವುದು ಯಾರೇ ಮೇಲುಗೈ ಸಾಧಿಸಿದರೂ ಅಂತಿಮವಾಗಿ ಕಾಂಗ್ರೆಸ್ ಗೆಲ್ಲುತ್ತದೆ! ಎಂದು ಅವರು ಹೇಳಿದ್ದಾರೆ.

ನಾಮಪತ್ರ ಪ್ರಕ್ರಿಯೆಯ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ತರೂರ್ ಅವರು ಈಗಾಗಲೇ ಘೋಷಿಸಿದ್ದಾರೆ.

ಈ ಹುದ್ದೆಗೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com